ಇಟಲಿ ನೈಟ್'ಕ್ಲಬ್'ನಲ್ಲಿ ಕಾಲ್ತುಳಿತ: 6 ಸಾವು, 35 ಮಂದಿಗೆ ಗಾಯ
ಇಟಲಿಯ ಕರಾವಳಿ ಭಾಗ ಅಂಕೋನಾದಲ್ಲಿರುವ ನೈಟ್'ಕ್ಲಬ್'ವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ...
ಇಟಲಿ ನೈಟ್'ಕ್ಲಬ್'ನಲ್ಲಿ ಕಾಲ್ತುಳಿತ: 6 ಸಾವು, 35 ಮಂದಿಗೆ ಗಾಯ
ಅಂಕೋನಾ: ಇಟಲಿಯ ಕರಾವಳಿ ಭಾಗ ಅಂಕೋನಾದಲ್ಲಿರುವ ನೈಟ್'ಕ್ಲಬ್'ವೊಂದರಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ.
ಕೊರಿನಾಲ್ಡೊದ ಬ್ಲೂ ಲಾಂಟರ್ನ್ ಕ್ಲಬ್'ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಕ್ಲಬ್ ನಲ್ಲಿ ಇದ್ದಕ್ಕಿದ್ದಂತೆಯೇ ದುರ್ವಾಸನೆ ಹರಡಿತ್ತು. ಇದರಿಂದಾಗಿ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿ ಕಾಲ್ತುಳಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕ್ಲಬ್ ವೊಳಗೆ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಒಳಗೆ ಇರಲು ಸಾಧ್ಯವಾಗದೆ, ಒಮ್ಮೆಲೆ ಜನರು ಹೊರಬರಲು ಆರಂಭಿಸಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿದೆ. ಘಟನೆ ವೇಳೆ ಸ್ಥಳದಲ್ಲಿ ಬಹುತೇಕ ಮಂದಿ ಯುವಕ ಹಾಗೂ ಯುವತಿಯರೇ ಇದ್ದರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಮೂವರು ಯುವತಿಯರು, ಇಬ್ಬರು ಯುವಕರು ಹಾಗೂ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ರಕ್ಷಣೆ ಮಾಡಿದ್ದಾರೆ.