ಸತತ 9 ವರ್ಷಗಳ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜೇಕಬ್ ಜುಮಾ ಅವರ ಖ್ಯಾತಿ ಕುಂದುತ್ತಾ ಬಂದಿತ್ತು. ಅಲ್ಲದೆ ತಮ್ಮದೇ ಸ್ವಪಕ್ಷೀಯರಿಂದಲೇ ಜುಮಾ ತೀವ್ರ ವಿರೋಧ ಎದುರಿಸಿತ್ತಿದ್ದರು. ಇತ್ತೀಚೆಗಷ್ಟೇ ಜುಮಾ ಅವರನ್ನು ಎಎನ್ ಸಿ ಪಕ್ಷದಿಂದ ವಜಾ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೂ ಮೊದಲು ರಾಜೀನಾಮೆ ನೀಡುವಂತೆ ಪಕ್ಷ ಮಾಡಿದ್ದ ಮನವಿಯನ್ನು ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ ಮುಕ್ತಾಯಗೊಳಿಸಿದ್ದ ಎಎನ್ ಸಿ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲು ನಿರ್ಧರಿಸಿತ್ತು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 107 ಸದಸ್ಯರು ಸುದೀರ್ಘ ಅವಧಿಯ ಸಭೆ ನಡೆಸಿ ಅಧ್ಯಕ್ಷರನ್ನು ವಜಾಗೊಳಿಸುವ ತೀರ್ಮಾನಕ್ಕೆ ಬಂದಿದ್ದರು ಎನ್ನಲಾಗಿತ್ತು.