ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ 'ಎಲ್ಲ ಆಯ್ಕೆಯೂ ನಮ್ಮಲ್ಲಿವೆ': ವೈಟ್ ಹೌಸ್ ಎಚ್ಚರಿಕೆ

ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ವಾಷಿಂಗ್ಟನ್‌: ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ  ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಚೇರಿ ಹಾಗೂ ಅಮೆರಿಕ ಸರ್ಕಾರದ ಕಚೇರಿ ವೈಟ್ ಹೌಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ವಿಹರಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆ ಹಾಗೂ  ಕುಖ್ಯಾತ ಹಖ್ಖಾನಿ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಸರ್ಕಾರ ಕೂಡಲೇ ನಾಮಾವಶೇಷ ಮಾಡುವ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪಾಕಿಸ್ತಾನದೊಂದಿಗೆ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳು  ತನ್ನ ಮೇಜಿನ ಮೇಲೆ ಇವೆ ಎಂದು ಶ್ವೇತ ಭವನ ಹೇಳಿದೆ.
ಈಗಾಗಲೇ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ  2 ಶತಕೋಟಿ ಡಾಲರ್‌ ಗಳ ಭದ್ರತಾ ನೆರವನ್ನು ಅಮಾನತು ಮಾಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಳೆದ ಹದಿನೈದು ವರ್ಷಗಳಿಂದ  ಪಾಕಿಸ್ತಾನ ಅಮೆರಿಕದಿಂದ 33 ಶತಕೋಟಿ ಡಾಲರ್‌ಗಳ ಭದ್ರತಾ ನೆರವನ್ನು ಪಡೆದಿದ್ದು ಇದಕ್ಕೆ ಪ್ರತಿಯಾಗಿ ಅದು ಅಮೆರಿಕಕ್ಕೆ ಕೇವಲ ಸುಳ್ಳಿನ ಕಂತೆಯನ್ನು ನೀಡಿದೆಯಲ್ಲದೆ ನೆರವುದಾತನ ವಿರುದ್ಧವೇ ಡಬಲ್‌ ಗೇಮ್‌ ಆಡಿದೆ  ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನ ಹಿಂದೆಯೇ ಪಾಕಿಸ್ತಾನಕ್ಕೆ ಅಮೆರಿಕ ನೀಡಬೇಕಿದ್ದ ಆರ್ಥಿಕ ನೆರವಿಗೂ ಅಮೆರಿಕ ಕಾಂಗ್ರೆಸ್ ಕೊಕ್ಕೆ ಹಾಕಿತ್ತು. ಅಂತೆಯೇ ನ್ಯಾಟೋ ಸ್ನೇಹಿತ ರಾಷ್ಟ್ರ ಪಟ್ಟಿಯಿಂದಲೂ ಪಾಕಿಸ್ತಾನಕ್ಕೆ ಅಮೆರಿಕ  ಗೇಟ್ ಪಾಸ್ ನೀಡಿತ್ತು.
ಈ ಬೆಳವಣಿದೆಯಾದ ಕೇವಲ 24 ಗಂಟೆಗಳ ಅವಧಿಯಲ್ಲೇ ಮತ್ತೆ ಪಾಕಿಸ್ತಾನದ ವಿರುದ್ಧ ಕೆಂಡಕಾರಿರುವ ಅಮೆರಿಕ, ಉಗ್ರ ಸಂಘಟನೆಗಳನ್ನು ನಾಶ ಮಾಡಿ ಎಂದು ಖಡಕ್ ಎಚ್ಚರಿತೆ ನೀಡಿದೆ. ತಾಲಿಬಾನ್‌ ಮತ್ತು ಹಕ್ಕಾನಿ ಉಗ್ರ  ಜಾಲವನ್ನು ನಿರ್ನಾಮ ಮಾಡಬೇಕೆಂದು ಪಾಕಿಸ್ತಾನಕ್ಕೆ ಮನವರಿಕೆ ಮಾಡವಲ್ಲಿನ ಕ್ರಮವಾಗಿ ಭದ್ರತಾ ನೆರವನ್ನು ನಿಲ್ಲಿಸುವ ಮಾರ್ಗವಲ್ಲದೆ ಬೇರೆ ಉಪಾಯಗಳೂ ತಮ್ಮಲ್ಲಿ ಇವೆ ಎಂದು ಅಮೆರಿಕ ಸ್ಪಷ್ಟಪಡಿಸಿದ್ದು, ಭವಿಷ್ಯದಲ್ಲಿ  ಪಾಕಿಸ್ತಾನದ ನಡೆಯನ್ನು ಗಮನಿಸಿ ಅದರ ಆಧಾರದ ಮೇಲೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com