ಹಫೀಜ್ ಸಯ್ಯೀದ್ 'ಸಾಬ್' ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ: ಪಾಕ್ ಪ್ರಧಾನಿ ಶಾಹೀದ್ ಖಖಾನ್ ಅಬ್ಬಾಸಿ

ಮುಂಬೈ ಉಗ್ರ ದಾಳಿ ರೂವಾರಿ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಾಹೀದ್ ಖಖಾನ್ ಅಬ್ಬಾಸಿ ಹೇಳಿದ್ದಾರೆ.
ಪಾಕ್ ಪ್ರಧಾನಿ ಅಬ್ಬಾಸಿ (ಸಂಗ್ರಹ ಚಿತ್ರ)
ಪಾಕ್ ಪ್ರಧಾನಿ ಅಬ್ಬಾಸಿ (ಸಂಗ್ರಹ ಚಿತ್ರ)
ಇಸ್ಲಾಮಾಬಾದ್: ಮುಂಬೈ ಉಗ್ರ ದಾಳಿ ರೂವಾರಿ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಾಹೀದ್ ಖಖಾನ್ ಅಬ್ಬಾಸಿ ಹೇಳಿದ್ದಾರೆ.
ಜಿಯೋ ಟಿವಿಗೆ ಸಂದರ್ಶನ ನೀಡಿರುವ ಪಾಕ್ ಪ್ರಧಾನಿ ಶಾಹೀದ್ ಖಖಾನ್ ಅಬ್ಬಾಸಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯ್ಯೀದ್ ನನ್ನು ಸಾಹಬ್ ಎಂದು ಸಂಬೋಧಿಸಿದ್ದು, ಮಾತ್ರವಲ್ಲದೇ ಅವರ ವಿರುದ್ಧ ಕ್ರಮ  ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಲಾಹೋರ್ ಹೈಕೋರ್ಟ್‌ ಆದೇಶದ ಮೇರೆಗೆ ಇತ್ತೀಚೆಗೆ ಗೃಹಬಂಧನದಿಂದ ಬಿಡುಗಡೆಯಾಗಿರುವ ಜಮಾತ್‌ ಉದ್‌ ದಾವಾ ಮುಖ್ಯಸ್ಥ ಸಯೀದ್‌ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಪಾಕ್‌ ಪ್ರಧಾನಿ ಈ ರೀತಿ  ಉತ್ತರಿಸಿದ್ದು,  "ಹಫೀಜ್ ಸಯ್ಯೀದ್ ಸಾಹಬ್ ವಿರುದ್ಧ ಪಾಕಿಸ್ತಾನದಲ್ಲಿ ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ.. ಹೀಗಿರುವಾಗ ಭಾರತ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದು, ಭಾರತ ಒತ್ತಡ ಹೇರಿದ ಮಾತ್ರಕ್ಕೆ ಅವರ ವಿರುದ್ಧ  ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ಕೇಸು ದಾಖಲಾದಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ" ಎಂದು ಅಬ್ಬಾಸಿ ಹೇಳಿದ್ದಾರೆ.
ಅಂತೆಯೇ ಪ್ರಸ್ತುತ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಉಲ್ಬಣವಾಗಿರುವ ಪ್ರಕ್ಷುಬದ್ಧ ಪರಿಸ್ಥಿತಿ ಕುರಿತು ಮಾತನಾಡಿರುವ ಅಬ್ಬಾಸಿ ಭಾರತ-ಪಾಕ್‌ ನಡುವೆ ಯಾವುದೇ ಯುದ್ಧದ ಸಾಧ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.
ಈ ಹಿಂದಷ್ಟೇ ಉಗ್ರ ಹಫೀಜ್ ಸಯ್ಯೀದ್ ನನ್ನು ಪಾಕಿಸ್ತಾನ ಕೋರ್ಟ್ ಗೃಹ ಬಂಧನದಲ್ಲಿಟ್ಟಿತ್ತು. 2018ರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಉಗ್ರ ಹಫೀಜ್ ಸಯ್ಯೀದ್, ಮಿಲ್ಲಿ ಮುಸ್ಲಿಂ ಲೀಗ್ ಎಂಬ ಪಕ್ಷ ಸ್ಥಾಪನೆ  ಮಾಡಿದ್ದಾನೆ. ಇತ್ತೀಚೆಗಷ್ಟೇ ಇದೇ ಪಾಕಿಸ್ತಾನ ಸರ್ಕಾರ ಹಫೀಜ್ ಸಯ್ಯೀದ್ ಉಗ್ರ ಸಂಘಟನೆ ಜೆಯುಡಿ ಮತ್ತು ಫಲ್ಹಾ ಇ ಇನ್ಸಾನಿಯತ್ ಫೌಂಡೇಷನ್ ವಿರುದ್ಧ ಕ್ರಮ ಜರುಗಿಸಿ ಹಣ ಸಂಗ್ರಹಣೆಗೆ ನಿಷೇಧ ಹೇರಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಉಗ್ರ ಹಫೀಜ್ ಸಯ್ಯೀದ್ ಮಿಲ್ಲಿ ಮುಸ್ಲಿಂ ಲೀಗ್ ಪಕ್ಷ ಸ್ಛಾಪನೆ ಮಾಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com