ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇರಾನ್ ನಿಂದ ಕುಲಭೂಷಣ್ ಜಾದವ್ ಅಪಹರಣಕ್ಕೆ ಕೋಟಿ ಕೋಟಿ ವ್ಯಯಿಸಿದ್ದ ಐಎಸ್ಐ!

ಭಾರತದ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರನ್ನು ಇರಾನ್ ನಿಂದ ಅಪಹರಣ ಮಾಡಲಾಗಿತ್ತು. ಇದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕೋಟಿ ಕೋಟಿ ಹಣ ವ್ಯಯಿಸಿತ್ತು ಎಂದು ಬಲೂಚ್ ಹೋರಾಟಗಾರ ಮಮ ಖಾದಿರ್ ಗಂಭೀರ ಆರೋಪ ಮಾಡಿದ್ದಾರೆ.
Published on
ನವದೆಹಲಿ: ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರನ್ನು ಇರಾನ್ ನಿಂದ ಅಪಹರಣ ಮಾಡಲಾಗಿತ್ತು. ಇದಕ್ಕಾಗಿ  ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕೋಟಿ ಕೋಟಿ ಹಣ ವ್ಯಯಿಸಿತ್ತು ಎಂದು ಬಲೂಚ್ ಹೋರಾಟಗಾರ ಮಮ ಖಾದಿರ್ ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳೀಯ ವಾಹಿನಿಯೊಂದಿಗೆ ಮಾತನಾಡಿರುವ ಮಮ ಖಾದಿರ್ ಅವರು, ಕುಲಭೂಷಣ್ ಜಾದವ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರಲಿಲ್ಲ. ಅವರು ಇರಾನ್ ನಲ್ಲಿ ಇದ್ದರು. ಈ ವೇಳೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ  ಕುಲಭೂಷಣ್ ಜಾದವ್ ಅಪಹರಣಕ್ಕೆ ಸಂಚು ರೂಪಿಸಿತ್ತು. ಇದಕ್ಕಾಗಿ ಪಾಕಿಸ್ತಾನ ಮೂಲದ ಉಗ್ರ ಒಮರ್ ಮುಲ್ಲಾನೊಂದಿಗೆ ಒಪ್ಪಂದ ಮಾಡಿಕೊಂಡು ಆತನಿಗೆ ಕೋಟಿ ಕೋಟಿ ಹಣ ನೀಡಿತ್ತು. ಒಪ್ಪಂದದನ್ವಯ ಒಮರ್ ಮುಲ್ಲಾ  ಇರಾನ್ ಚಾಬಹರ್ ಬಂದರಿನಿಂದ ಕುಲಭೂಷಣ್ ಜಾದವ್ ರನ್ನು ಅಪಹರಣ ಮಾಡಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತಂದರು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಮ್ಮ ಬಲೂಚ್ ಹೋರಾಟಗಾರರಿಗೆ ಮಾಹಿತಿ ದೊರೆತಿದ್ದಷ್ಟೇ ಅಲ್ಲದೆ ಆ ಪ್ರಕರಣಕ್ಕೆ ಅವರ ಪ್ರಮುಖ ಸಾಕ್ಷಿಯಾಗಿದ್ದರು. ಅಪಹರಣ ವೇಳೆ ಜಾದವ್ ಅವರ ಕೈ-ಕಾಲುಗಳನ್ನು ಕಟ್ಟಿ ಕಣ್ಣಿಗೆ ಕಪ್ಪು ಪಟ್ಟಿ ಎರಡು ಬಾಗಿಲು ಕಾರಿಗೆ  ಬಲವಂತವಾಗಿ ಹೇರಿಕೊಂಡು ಪಾಕಿಸ್ತಾನಕ್ಕೆ ಕರೆತರಲಾಗಿತ್ತು. ಕಾರಿನಲ್ಲೇ ಇರಾನ್-ಬಲೂಟಿಸ್ತಾನ ಗಡಿ ಪ್ರದೇಶದ ಮಷ್ಕೆಲ್ ಪ್ರಾಂತ್ಯಕ್ಕೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಬಲೂಚಿಸ್ತಾನ ರಾಜಧಾನಿ ಖ್ವೆಟ್ಟಾಗೆ ಅಲ್ಲಿಂದ  ಇಸ್ಲಾಮಾಬಾದ್ ಕರೆದೊಯ್ಯಲಾಗಿತ್ತು. ಇರಾನ್ ನಲ್ಲಿ ಕುಲಭೂಷಣ್ ಜಾದವ್ ಓರ್ವ ಉದ್ಯಮಿಯಾಗಿದ್ದರು. ಐಎಸ್ಐ ಜಾದವ್ ರನ್ನು ಬಲೂಚಿಸ್ತಾನದಲ್ಲಿ ಸೆರೆಹಿಡಿಯಲಾಗಿತ್ತು ಎಂದು ಹೇಳಿಕೊಳ್ಳುತ್ತಿದೆ. ಆದರೆ ಜಾದವ್ ಗೆ  ಬಲೂಚಿಸ್ತಾನ ಹೇಗಿದೆ ಎಂಬ ಮಾಹಿತಿ ಕೂಡ ಇರಲಿಲ್ಲ ಎಂದು ಮಮ ಖಾದಿರ್ ಹೇಳಿದ್ದಾರೆ.
ಇದೀಗ ಮಮಖಾದಿರ್ ಹೇಳಿಕೆ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿದ್ದು, ಖಾದಿರ್ ಹೇಳಿಕೆಗೆ ಈ ವರೆಗೂ ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com