ಕದನ ವಿರಾಮ ಉಲ್ಲಂಘನೆ ಆರೋಪ: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಪಾಕ್

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ, ನಾಗರೀಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ, ಇದೀಗ ತನ್ನದೇನೂ ತಪ್ಪಿಲ್ಲ ಎಂಬಂತೆ ವರ್ತಿಸತೊಡಗಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ, ನಾಗರೀಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ, ಇದೀಗ ತನ್ನದೇನೂ ತಪ್ಪಿಲ್ಲ ಎಂಬಂತೆ ವರ್ತಿಸತೊಡಗಿದ್ದು, ಗಡಿಯಲ್ಲಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ, ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಭಾನುವಾರ ಸಮನ್ಸ್ ಜಾರಿ ಮಾಡಿದೆ. 
ಪಾಕಿಸ್ತಾನದಲ್ಲಿರುವ ಭಾರತದ ಉಪ ಹೈಕಮಿಷನರ್ ಜೆ.ಪಿ. ಸಿಂಗ್ ಅವರಿಗೆ, ಪಾಕಿಸ್ತಾನ ಮಹಾ ನಿರ್ದೇಶಕ ಮೊಹಮ್ಮದ್ ಫೈಸಲ್ ಅವರು ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 
ಜನವರಿ 20-21 ಭಾರತೀಯ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ನಿಖಿಯಾಲ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದರ ಪರಿಣಾಮ ಗಡಿಯಲ್ಲಿ 33 ವರ್ಷದ ವ್ಯಕ್ತಿ ಹಾಗೂ 25 ವರ್ಷ ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೆ, ಮತ್ತೊಬ್ಬ ಮಹಿಳೆ ಹಾಗೂ ಬಾಲಕಿ ಗಾಯಗೊಂಡಿದ್ದಾರೆಂದು ಸಮನ್ಸ್ ನಲ್ಲಿ ಪಾಕಿಸ್ತಾನ ಹೇಳಿದೆ ಎಂದು ವರದಿಗಳು ತಿಳಿಸಿವೆ. 
ಗಡಿಯಲ್ಲಿ ಭಾರತೀಯ ಸೇನೆ ನಾಗರೀಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ನಾಗರೀಕರ ಪ್ರದೇಶಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿರುವುದು ನಿಜಕ್ಕೂ ಶೋಚನೀಯವಾದದ್ದು. ಇದು ಮಾನವ ಘನತೆ, ಅಂತರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಮಾನವೀಯ ಕಾನೂನುಗಳಿಗೆ ವಿರುದ್ಧವಾಗಿದೆ. ಗಡಿಯಲ್ಲಿ ಭಾರತೀಯ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದು ಸ್ಥಳೀಯರ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯಾಗಿದೆ. ಭಾರತದ ಈ ರೀತಿಯ ವರ್ತನೆಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ. ಭಾರತ 2003ರ ಕದನ ವಿರಾಮ ಒಪ್ಪಂದವನ್ನು ಗೌರವಿಸಬೇಕು ಹಾಗೂ ಪದೇ ಪದೇ ನಡೆಸಲಾಗಿರುವ ಕದನ ವಿರಾಮ ಉಲ್ಲಂಘನೆ ಕುರಿತಂತೆ ತನಿಖೆ ನಡೆಸಬೇಕೆಂದು ತಿಳಿಸಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com