ಚೀನಾ ಆತಂಕಕ್ಕೆ ಕಾರಣವಾದ ಟ್ರಂಪ್, ಕಿಮ್ ಐತಿಹಾಸಿಕ ಭೇಟಿ

ಸಿಂಗಾಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ತರ ಕೊರಿಯಾ, ಅಮೆರಿಕ ದ್ವಿಪಕ್ಷೀಯ ಮಾತುಕತೆ ಚೀನಾ ದೇಶಕ್ಕೆ ತೀವ್ರ ಆತಂಕ ತಂದೊಡ್ಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಸಿಂಗಾಪುರದಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ತರ ಕೊರಿಯಾ, ಅಮೆರಿಕ ದ್ವಿಪಕ್ಷೀಯ ಮಾತುಕತೆ ಚೀನಾ ದೇಶಕ್ಕೆ ತೀವ್ರ ಆತಂಕ ತಂದೊಡ್ಡಿದೆ.
ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿ ಭೇಟಿ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈ ಭೇಟಿ ತನ್ನ ಅಸ್ತಿತ್ವಕ್ಕೇ ಧಕ್ಕೆ ತರಬಲ್ಲದು ಎಂಬ ಆತಂಕ ಚೀನಾವನ್ನು ಕಾಡುತ್ತಿದೆ. 
ಅಮೆರಿಕ ಮತ್ತು ಉತ್ತರ ಕೊರಿಯಾ ದೇಶಗಳು ಪರಸ್ಪರ ಅಣ್ವಸ್ತ್ರ ಸಂಗ್ರಹ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಉತ್ತರ ಕೊರಿಯಾದ ಪ್ರತೀ ಅಣ್ವಸ್ತ್ರ ಪರೀಕ್ಷೆಗೂ ಅಮೆರಿಕ ಭಾರಿ ವಿರೋಧ ವ್ಯಕ್ತಪಡಿಸುತ್ತಿತ್ತು. ಇದು ಉಭಯ ರಾಷ್ಟ್ರಗಳ ಮಧ್ಯೆ ಶೀತಲ ಸಮರ ಮತ್ತು ವಾಕ್ಸಮರಕ್ಕೆ ಕಾರಣವಾಗಿತ್ತು. ಆದರೆ ಚೀನಾ ಮಾತ್ರ ಉತ್ತರ ಕೊರಿಯಾಗೆ ಹಿಂಬಾಗಿಲ ಬೆಂಬಲ ನೀಡಿ, ಆ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಇದಕ್ಕೆ ಇಂಬು ನೀಡುವಂತೆ ಅಣ್ವಸ್ತ್ರ ಪರೀಕ್ಷೆಯ ಬಳಿಕ ವಿಶ್ವಸಂಸ್ಥೆ ನಿರ್ಬಂಧ ಹೇರುವ ಕುರಿತು ಎಚ್ಚರಿಕೆ ನೀಡಿದ ಬೆನ್ನಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚೀನಾಗೆ ಭೇಟಿ ನೀಡಿ ಚೀನಾ ಅಧ್ಯಶ್ರ ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡಿ ತೆರಳಿದ್ದರು.
ಇದೇ ಕಾರಣಕ್ಕೆ ಚೀನಾ ಕೂಡ ಕಿಮ್ ಟ್ರಂಪ್ ಭೇಟಿ ಅಸಾಧ್ಯ ಎಂದೇ ಭಾವಿಸಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಟ್ರಂಪ್ ರನ್ನು ಭೇಟಿ ಮಾಡಿದ್ದು, ಎಲ್ಲರ ಕೇಂದ್ರ ಬಿಂದುವಾಗಿರುವ ಅಣ್ವಸ್ತ್ರ ನಿಷೇಧ ಅಥವಾ ನಿಯಂತ್ರಣ ವಿಚಾರದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಇದೇ ಕಾರಣಕ್ಕೆ ಉತ್ತರ ಕೊರಿಯಾ ಅಣ್ವಸ್ತ್ರ ಯೋಜನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದ ಚೀನಾಗೆ ಆತಂಕ ಶುರುವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿಮ್-ಟ್ರಂಪ್ ಭೇಟಿ ಸಂದರ್ಭದಲ್ಲಿ ಉಭಯ ನಾಯಕರು ಒಪ್ಪಂದ ಮಾಡಿಕೊಂಡು ಅಣ್ವಸ್ತ್ರ ಬಳಕೆಗೆ ನಿರ್ಬಂಧ ಹೇರಿದರೆ ಮತ್ತು ಉತ್ತರ ಕೊರಿಯಾದ ಸಾಂಪ್ರದಾಯಿಕ ವೈರಿ ದಕ್ಷಿಣ ಕೊರಿಯಾ ಜತೆ ಬಾಂಧವ್ಯ ಸಾಧಿಸಿದರೆ, ಅದರಿಂದ ಚೀನಾಗೆ ಭಾರಿ ಹಿನ್ನಡೆಯಾಗಲಿದೆ. ಅಂತೆಯೇ ಕಿಮ್ ಮತ್ತು ಟ್ರಂಪ್ ಗೆಳೆತನಕ್ಕೆ ಮುಂದಾದರೆ ಮತ್ತು ಅದರಿಂದ ದಕ್ಷಿಣ ಕೊರಿಯಾದ ಜತೆ ಕಿಮ್ ವೈರತ್ವ ಬಿಟ್ಟುಬಿಟ್ಟರೆ ಇದರಿಂದ ತನ್ನ ಅಸ್ಥಿತ್ವಕ್ಕೆ ಧಕ್ಕೆಯಾಗಬಹುಜು ಎಂದು ಚೀನಾ ಆತಂಕವಾಗಿದೆ. 
ಈ ಬಗ್ಗೆ ಬೀಜಿಂಗ್ ನ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದು,  ಉತ್ತರ ಕೊರಿಯಾ ಅಮೆರಿಕಕ್ಕೆ ಹತ್ತಿರವಾದರೆ, ಅದರಿಂದ ಉತ್ತರ ಕೊರಿಯಾ ಮತ್ತು ಚೀನಾದ ನಡುವಣ ಬಾಂಧವ್ಯ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸುತ್ತಿದ್ದಾರೆ. ಅಲ್ಲದೆ ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿರುವ ಅಮೆರಿಕ ವಿರುದ್ಧ ತೊಡೆ ತಟ್ಟುತ್ತಿದ್ದ ಚೀನಾಗೆ ಇದ್ದ ಏಕೈಕ ಅಸ್ತ್ರ ಕೂಡ ಅದರ ಕೈ ಜಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com