ವಾಷಿಂಗ್ ಟನ್: ಮುಂದಿನ ತಿಂಗಳು ಯುರೋಪ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜು.11-12 ಕ್ಕೆ ನಡೆಯಲಿರುವ ಬ್ರಸೆಲ್ಸ್ ನಲ್ಲಿ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರನ್ನೂ ಭೇಟಿ ಮಾಡಲಿದ್ದಾರೆ.
ಚೀನ, ರಷ್ಯಾ ಹಾಗೂ ಇತರ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಉತ್ತಮವಾದ ಆಯ್ಕೆ. ಅಮೆರಿಕ ಹಾಗೂ ವಿಶ್ವಕ್ಕೂ ಇದರಿಂದ ಒಳಿತಾಗುತ್ತದೆ ಎಂದು ಮೊದಲ ದಿನದಿಂದಲೂ ಹೇಳಿದ್ದೇನೆ. ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಸಿರಿಯಾ, ಉಕ್ರೇನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪುಟಿನ್ ಜೊತೆ ಮಾತುಕತೆ ನಡೆಸುವುದಾಗಿ ಟ್ರಂಪ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.