
ವಾಷಿಂಗ್ಟನ್: ಭಾರತದಿಂದ ರಫ್ತಾಗುವ 50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು ಮಾಡಿ ಅಮೆರಿಕಾ ಆಘಾತ ಕೊಟ್ಟ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು ಎರಡೂ ದೇಶಗಳ ನಡುವಿನ ವ್ಯಾಪಾರ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಮೆರಿಕಾ ಶ್ವೇತಭವನ ನಿನ್ನೆ ದೃಢಪಡಿಸಿದೆ. ಇದರಿಂದ ಭಾರತದ ಉದ್ಯಮ ಕ್ಷೇತ್ರದ ಪಾಲಿಗೆ ಇನ್ನೂ ಆಶಾವಾದ ಉಳಿದುಕೊಂಡಿದೆ.
ನಾವು(ಭಾರತ ಮತ್ತು ಅಮೆರಿಕಾ) ಮಾತುಕತೆ ನಡೆಸುತ್ತಿದ್ದೇವೆ. ಅತಿ ಉನ್ನತ ಮೌಲ್ಯ ನೀಡುವ ದೇಶಗಳಲ್ಲಿ ಭಾರತ ನಮಗೆ ಮುಖ್ಯವಾದುದು. ನಮ್ಮ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೂ ಮಾತುಕತೆ ಹಂತದಲ್ಲಿದ್ದೇವೆ ಎಂದು ಶ್ವೇತ ಭವನದ ಮುಖ್ಯ ಆರ್ಥಿಕ ಸಲಹೆಗಾರ ಲಾರ್ರಿ ಕುಡ್ಲೊ ಸುದ್ದಿಗಾರರಿಗೆ ತಿಳಿಸಿದರು.
ವಾಣಿಜ್ಯ ವಿಷಯಗಳ ಕುರಿತು ಇಬ್ಬರೂ ನಾಯಕರು ಯಾವಾಗ, ಏನು ಮಾತನಾಡಿಕೊಂಡರು ಎಂಬ ಬಗ್ಗೆ ಕುಡ್ಲೊ ವಿವರ ನೀಡಿಲ್ಲ. ಈ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ, ಉತ್ತಮ ಹಾದಿಯಲ್ಲಿ ಮಾತುಕತೆ ನಡೆಯುತ್ತಿದೆ ಎಂದಷ್ಟೇ ಹೇಳಿದರು. ಕಳೆದ ಕೆಲವು ತಿಂಗಳಿನಿಂದ ಟ್ರಂಪ್ ವಿಶ್ವ ನಾಯಕರೊಂದಿಗೆ ನಡೆಸುವ ದೂರವಾಣಿ ಸಂಭಾಷಣೆಯ ವಿವರಗಳನ್ನು ಶ್ವೇತಭವನ ನೀಡುತ್ತಿಲ್ಲ.ಸ್ವತಃ ಟ್ರಂಪ್ ಅವರೇ ತಮ್ಮ ದೂರವಾಣಿ ಸಂಭಾಷಣೆಯ ವಿವರಗಳನ್ನು ಟ್ವೀಟ್ ಮಾಡುತ್ತಾರಷ್ಟೆ.
ಈ ಬಗ್ಗೆ ನಿನ್ನೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಸುರೇಶ್ ಪ್ರಭು, ದ್ವಿಪಕ್ಷೀಯ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಭಾರತ ಮತ್ತು ಅಮೆರಿಕಾ ಮಾತುಕತೆ ನಡೆಸುತ್ತಿವೆ. ಸಂಧಾನ ಮಾತುಕತೆ ಮುಂದುವರಿದಿದೆ, ಈ ಹಂತದಲ್ಲಿ ಅಮೆರಿಕಾ ಅವಕಾಶವೊಂದನ್ನು ನೀಡಿದೆ. ಅದಕ್ಕೆ ನಾವು ಕೂಡ ಅವಕಾಶವೊಂದನ್ನು ನೀಡಿದ್ದೇವೆ. ಈ ದಿಸೆಯಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತದ ಕೆಲವು ಸ್ಟೀಲ್ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಅಧಿಕ ತೆರಿಗೆ ಹೇರುವುದರಿಂದ ವಿನಾಯ್ತಿ ನೀಡುವಂತೆ, ಕೆಲವು ಸ್ಥಳೀಯ ವಸ್ತುಗಳಿಗೆ ಸಾಮಾನ್ಯ ಆದ್ಯತೆ ವ್ಯವಸ್ಥೆ(ಜಿಎಸ್ ಪಿ)ಯಡಿ ವಿನಾಯ್ತಿ ನೀಡುವಂತೆ, ಭಾರತದ ಕೃಷಿ, ಆಟೊಮೊಬೈಲ್, ಆಟೋ ಉಪಕರಣಗಳು ಮತ್ತು ಎಂಜಿನಿಯರಿಂಗ್ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ವಿಶಾಲ ಮಾರುಕಟ್ಟೆ ಒದಗಿಸಿಕೊಡುವಂತೆ ಭಾರತ ಅಮೆರಿಕಾವನ್ನು ಒತ್ತಾಯಿಸುತ್ತಿದೆ.
1976ರಲ್ಲಿ ಅಮೆರಿಕಾ ಜಾರಿಗೆ ತಂದ ಜಿಎಸ್ ಪಿಯಡಿ ಭಾರತದ ಸುಮಾರು ಮೂರೂವರೆ ಸಾವಿರಕ್ಕೂ ಅಧಿಕ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ರಫ್ತು ತೆರಿಗೆ ವಿನಾಯ್ತಿ ಸೌಲಭ್ಯ ಸಿಗುತ್ತಿದೆ. ಭಾರತದ ಬೇಡಿಕೆಗೆ ಪ್ರತಿಯಾಗಿ ಅಮೆರಿಕಾ ಭಾರತವನ್ನು ತನ್ನ ದೇಶದ ಕೃಷಿ, ಉತ್ಪಾದನೆ ವಸ್ತುಗಳು ಮತ್ತು ವೈದ್ಯಕೀಯ ಸಾಧನಗಳಿಗೆ ಭಾರತದಲ್ಲಿ ಅಧಿಕ ಮಾರುಕಟ್ಟೆ ಒದಗಿಸಿಕೊಡುವಂತೆ ಒತ್ತಾಯಿಸುತ್ತಿದೆ.
ಕಳೆದ ಆರ್ಥಿಕ ಸಾಲಿನಲ್ಲಿ ಭಾರತದಿಂದ ಅಮೆರಿಕಾಕ್ಕೆ ರಫ್ತು ಆದ ವಸ್ತುಗಳ ಮೌಲ್ಯ 47.9 ಶತಕೋಟಿ ಡಾಲರ್ ಆಗಿದ್ದು, ಅಮೆರಿಕಾದಿಂದ ಆಮದು ಆದ ವಸ್ತುಗಳು 26.7 ಶತಕೋಟಿ ಮೌಲ್ಯದ್ದಾಗಿದೆ. ವ್ಯಾಪಾರ ಸಮತೋಲನ ಸದ್ಯ ಭಾರತದ ಪರವಾಗಿದೆ.
Advertisement