ಭಾರತದ ಪ್ರಜಾಪ್ರಭುತ್ವವನ್ನು ಗೌರವಿಸಬೇಕು: ಸಿಎಎ ಪ್ರತಿಭಟನೆ ಬಗ್ಗೆ ಅಮೆರಿಕಾ ಪ್ರತಿಕ್ರಿಯೆ 

ಪೌರತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಭಾರತ ದೇಶದೊಳಗೆ ತೀವ್ರ ಚರ್ಚೆ, ಪ್ರತಿಭಟನೆಯಾಗುತ್ತಿರುವ ಈ ಹೊತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಅಮೆರಿಕಾ ಗೌರವಿಸುತ್ತದೆ ಎಂದು ಅಮೆರಿಕಾದ ಉನ್ನತ ರಾಯಭಾರಿ ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕಾ ಸಚಿವರು
ಭಾರತ ಮತ್ತು ಅಮೆರಿಕಾ ಸಚಿವರು

ವಾಷಿಂಗ್ಟನ್ ಡಿಸಿ: ಪೌರತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಭಾರತ ದೇಶದೊಳಗೆ ತೀವ್ರ ಚರ್ಚೆ, ಪ್ರತಿಭಟನೆಯಾಗುತ್ತಿರುವ ಈ ಹೊತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಅಮೆರಿಕಾ ಗೌರವಿಸುತ್ತದೆ ಎಂದು ಅಮೆರಿಕಾದ ಉನ್ನತ ರಾಯಭಾರಿ ತಿಳಿಸಿದ್ದಾರೆ.


ಪ್ರತಿಯೊಂದು ಕಡೆಯಲ್ಲಿಯೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ರಕ್ಷಣೆಯನ್ನು ಕಾಪಾಡಲು ನಾವು ಆದ್ಯತೆ ನೀಡುತ್ತೇವೆ. ಭಾರತದ ಪ್ರಜಾಪ್ರಭುತ್ವವನ್ನು ನಾವು ಗೌರವಿಸುತ್ತೇವೆ ಎಂದು ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಅಮೆರಿಕಾ ನಡುವೆ 2+2 ಸಚಿವರ ಮಟ್ಟದ ಮಾತುಕತೆ ಮುಕ್ತಾಯದ ನಂತರ ಸುದ್ದಿಗೋಷ್ಠಿಯಲ್ಲಿ ಮೈಕ್ ಪೊಂಪಿಯೊ ತಿಳಿಸಿದರು.
ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರ ಜೊತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಎಸ್ ಜೈಶಂಕರ್ ಜೊತೆ ಮಾತುಕತೆ ನಡೆಸಿದ್ದಾರೆ. 


ಭಾರತದಲ್ಲಿ ಸಮಾಜದ ಒಂದು ವರ್ಗ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಅಮೆರಿಕಾದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಿರ್ದಿಷ್ಟ ದೇಶಗಳಿಂದ ಧಾರ್ಮಿಕ ಅಲ್ಪಸಂಖ್ಯಾತತೆಯ ಕಿರುಕುಳ ಅನುಭವಿಸಿ ಬಂದವರ ಕಷ್ಟಗಳಿಗೆ ಸ್ಪಂದಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಆ ದೇಶಗಳ ಅಲ್ಪಸಂಖ್ಯಾತರು, ಅವರ ಸಮಸ್ಯೆಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಭಾರತ ಏಕೆ ಈ ಕ್ರಮ ಕೈಗೊಂಡಿದೆ ಎಂಬುದು ಅರ್ಥವಾಗುತ್ತದೆ ಎಂದರು.


ಅಮೆರಿಕಾ ಕೇವಲ ಭಾರತದ ಸಮಸ್ಯೆಗೆ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ನಿರಂತರವಾಗಿ ಅಲ್ಲಿನ ಸಮಸ್ಯೆಗಳು, ವಿಷಯಗಳು ಬಂದಾಗ ಪ್ರತಿಕ್ರಿಯೆ ನೀಡುತ್ತಲೇ ಬಂದಿದೆ ಎಂದು ಅಮೆರಿಕಾ ಕಾರ್ಯದರ್ಶಿ ಪೊಂಪಿಯೊ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com