ಮಸೂದ್ ಅಜರ್ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ; ಚೀನಾ ಹೇಳಿದ್ದೇನು?

ಪ್ರಾಣಾಂತಿಕ ಬಾಂಬ್ ದಾಳಿ ನಡೆಸಿದ ಬಗ್ಗೆ ಭಾರತ ಹೊಸ ಬಲವಾದ ಸಾಕ್ಷ್ಯಾಧಾರಗಳನ್ನು ಹಂಚಿಕೊಂಡ ನಂತರ ...
ಜೈಶ್ ಎ ಮೊಹಮ್ಮದ್ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್
ಜೈಶ್ ಎ ಮೊಹಮ್ಮದ್ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್
Updated on
ಬೀಜಿಂಗ್: ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಬೆನ್ನಲ್ಲೇ ಭಾರತ ನೀಡಿರುವ ಹೊಸ ಸಾಕ್ಷ್ಯಾಧಾರಗಳು ಚೀನಾಕ್ಕೆ ಸಹ ಒಪ್ಪಿಗೆಯಾದಂತಿದೆ. ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ತಕರಾರು ತೆಗೆಯುತ್ತಿದ್ದ ಚೀನಾಗೆ ಕೊನೆಗೂ ಒಪ್ಪಿಕೊಳ್ಳಬೇಕಾದ ಸಂದಿಗ್ಧತೆ ಬಂದಿದೆ.
ಭಾರತ ಒದಗಿಸಿರುವ ಪರಿಷ್ಕೃತ ವಸ್ತುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಮತ್ತು ಸಂಬಂಧಪಟ್ಟ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಭಾರತದ ಪ್ರಸ್ತಾವನೆಗೆ ಚೀನಾ ಆಕ್ಷೇಪವೆತ್ತುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಇದಕ್ಕೂ ಮುನ್ನ ಚೀನಾ ವಿದೇಶಾಂಗ ಕಾರ್ಯದರ್ಶಿ ವಾಂಗ್ ಯಿ ಅವರನ್ನು ಭೇಟಿ ಮಾಡಿ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಚರ್ಚೆ ನಡೆಸಿದ್ದರು. ಈ ಸಂಬಂಧ ಅಜರ್ ವಿರುದ್ಧ ಇರುವ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಅವರು ಚೀನಾಕ್ಕೆ ಒದಗಿಸಿದ್ದರು.
ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ, ಅಮೆರಿಕಾ ಮತ್ತು ಬೇರೆ ದೇಶಗಳು ಒದಗಿಸಿದ್ದ ಎಲ್ಲಾ ದಾಖಲೆಗಳು, ಸಾಕ್ಷ್ಯಾಧಾರಗಳನ್ನು ಚೀನಾ 2009ರಿಂದಲೇ ನಿರಾಕರಿಸುತ್ತಾ ಬಂದಿತ್ತು.ಬೇರೆ ರಾಷ್ಟ್ರಗಳ ನಿರ್ಣಯಕ್ಕೆ ಚೀನಾ ಈ ಹಿಂದೆ ನಾಲ್ಕು ಬಾರಿ ತಾಂತ್ರಿಕವಾಗಿ ತಡೆಯೊಡ್ಡಿತ್ತು. ಸಾಕ್ಷ್ಯಾಧಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಖ್ಯಾತೆ ತೆಗೆದಿತ್ತು. ಅಮೆರಿಕಾ ಮತ್ತು ಇಂಗ್ಲೆಂಡಿನ ಸಹಮತವಿದ್ದ ಫ್ರಾನ್ಸ್ ಸರ್ಕಾರದ ನಿರ್ಣಯವನ್ನು ಚೀನಾ ಕಳೆದ ಮಾರ್ಚ್ 13ರಂದು ತಾಂತ್ರಿಕ ತಡೆ ನೀಡಿತ್ತು. ಆ ತಡೆಯನ್ನು ಚೀನಾ ನಿನ್ನೆ ಹಿಂಪಡೆದಿದೆ.
ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ 40 ಯೋಧರು ಹುತಾತ್ಮರಾದ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು. ಈ ಘಟನೆ ಬಳಿಕೆ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ನೀಡುವ ಸಂಬಂಧ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಕೇಳಿಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com