ಪಾಕಿಸ್ತಾನ ಭಾರತದೊಂದಿಗೆ ಯುದ್ಧದಲ್ಲಿ ಸೋತರೂ, ಅದರ ಪರಿಣಾಮ ಮಾತ್ರ ಗಂಭೀರವಾಗಿರುತ್ತದೆ: ಇಮ್ರಾನ್ ಖಾನ್ 

ತನ್ನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ  ಪ್ರಾಣ ಹೋಗುವವರೆಗೆ ಹೋರಾಡಲಿದೆ. ಪರಮಾಣು ಶಸ್ತ್ರಸಜ್ಜಿತ ದೇಶವು ತನ್ನ ಸ್ವಾತಂತ್ರ್ಯಕ್ಕಾಗಿ ಸಾವಿನ ತನಕ ಹೋರಾಡಿದಾಗ ನಂತರ ಅದರ ಪರಿಣಾಮ ಮಾತ್ರ ತೀವ್ರವಾಗಿರುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್
Updated on

ಮತ್ತೆ ಚರ್ಚೆಗೆ ಬಂದಿದೆ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಭಾರತದೊಂದಿಗೆ ಪರಮಾಣು ಸಜ್ಜಿತ ಯುದ್ಧ ಹೇಳಿಕೆ 

ಇಸ್ಲಾಮಾಬಾದ್: ಭಾರತದ ಮೇಲೆ ಪಾಕಿಸ್ತಾನ ಯುದ್ಧ ಸಾರುತ್ತದೆ ಎಂಬ ಚರ್ಚೆಯ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆ. 


ಭಾರತದೊಂದಿಗೆ ಪರಮಾಣು ಯುದ್ಧ ಸೇರಿದಂತೆ ಕೆಲವು ರೀತಿಯ ಯುದ್ಧಗಳ ನಿರೀಕ್ಷೆಯನ್ನು ಅವರು ಮತ್ತೊಮ್ಮೆ ಹೆಚ್ಚಿಸಿದ್ದಾರೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಖಂಡಿಸುತ್ತಾ ಬಂದಿರುವ ಪಾಕಿಸ್ತಾನ ಭಾರತ ಕಾಶ್ಮೀರವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿದೆ.


ಅಲ್ ಜಜೀರಾ ಎಂಬ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದೊಂದಿಗೆ ಯುದ್ಧಕ್ಕೆ ಹೋದರೆ ಪಾಕಿಸ್ತಾನ ಸೋತರೂ ಕೂಡ ನಂತರ ಅದರಿಂದ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 


ಕಾಶ್ಮೀರ ವಿಚಾರದಲ್ಲಿ ಭಾರತದ ಮೇಲೆ ಪರಮಾಣು ಯುದ್ಧದ ಬೆದರಿಕೆ ಒಡ್ಡುತ್ತಿದ್ದೀರಾ ಎಂದು ಸಂದರ್ಶಕರು ಕೇಳಿದಾಗ, ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಪಾಕಿಸ್ತಾನ ಪರಮಾಣು ಯುದ್ಧವನ್ನು ಯಾವತ್ತೂ ಆರಂಭಿಸುವುದಿಲ್ಲ ಎಂದು ಹೇಳಿದ್ದೇನೆ. ಮೂಲತಃ ನಾನು ಶಾಂತಿಪ್ರಿಯ, ಯುದ್ಧ ವಿರೋಧಿ, ಯುದ್ಧಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ನಂಬಿದವನು ನಾನು. ಬದಲಿಗೆ ಯುದ್ಧಗಳಿಂದ ಅನಪೇಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ವಿಯೆಟ್ನಾಂ, ಇರಾಕ್ ನಲ್ಲಿನ ಯುದ್ಧವನ್ನು ನೋಡಿ, ಯುದ್ಧಗಳು ಇತರ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ, ಬಹುಶಃ ಅದು ಮೂಲ ಹೋರಾಟಕ್ಕಿಂತ ಹೆಚ್ಚು ಗಂಭೀರವಾಗಿರುತ್ತದೆ ಎಂದರು.


ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳು ಸಾಂಪ್ರದಾಯಿಕವಾಗಿ ಯುದ್ಧ ಮಾಡಿದಾಗ ಅದು ಪರಮಾಣು ಯುದ್ಧದಲ್ಲಿಯೇ ಕೊನೆಯಾಗುವ ಸಾಧ್ಯತೆಯಿರುತ್ತದೆ. ಸಾಂಪ್ರದಾಯಿಕ ಯುದ್ಧವೊಂದರಲ್ಲಿ ನಾವು ಸೋತರೆ, ಅಥವಾ ದೇಶ ಎರಡು ಆಯ್ಕೆಗಳ ಮಧ್ಯೆ ಸಿಕ್ಕಿಹಾಕಿಕೊಂಡರೆ ಒಂದೋ ನೀವು ಶರಣಾಗಬೇಕು, ಇಲ್ಲವೇ ನಿಮ್ಮ ಸ್ವಾತಂತ್ರ್ಯಕ್ಕಾಗಿ ಕೊನೆಯ ಉಸಿರು ಇರುವವರೆಗೆ ಹೋರಾಡಬೇಕು. ಪಾಕಿಸ್ತಾನ ಸ್ವಾತಂತ್ರ್ಯ ಸಿಗುವವರೆಗೆ ಹೋರಾಡುತ್ತದೆ. ಪರಮಾಣು ಸಜ್ಜಿತ ದೇಶವೊಂದು ಕೊನೆಯವರೆಗೂ ಹೋರಾಡಿದರೆ ನಂತರ ಅದರಿಂದ ಗಂಭೀರ ಪರಿಣಾಮ ಉಂಟಾಗುತ್ತದೆ. 


ಇದಕ್ಕಾಗಿ ನಾವು ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಡಿ ಎಂದು ವಿಶ್ವಸಂಸ್ಥೆಯನ್ನು ಮತ್ತು ಪ್ರತಿ ಅಂತಾರಾಷ್ಟ್ರೀಯ ವೇದಿಕೆಯನ್ನು ಸಂಪರ್ಕಿಸಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಕಾಶ್ಮೀರ ಸಮಸ್ಯೆ ಈಗ ತುರ್ತು ಬಗೆಹರಿಸಬೇಕಾದ ಸಮಸ್ಯೆಯಾಗಿದೆ ಎಂದರು.
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಭಾರತದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಕಾಶ್ಮೀರವನ್ನು ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. 
ಕಳೆದ ಆಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ತೀರ್ಮಾನವನ್ನು ಭಾರತ ಸರ್ಕಾರ ತೆಗೆದುಕೊಂಡ ನಂತರ ಪಾಕಿಸ್ತಾನ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದಿದ್ದು ಮಾತ್ರವಲ್ಲದೆ ವ್ಯಾಪಾರ ಸಂಬಂಧವನ್ನು ಕೂಡ ಮುರಿದಿದೆ. ಇನ್ನು ಭಾರತದೊಂದಿಗೆ ಮಾತುಕತೆ ನಡೆಸಲು ಏನೂ ಉಳಿದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.


ಈ ಹೊತ್ತಿನಲ್ಲಿ ಅಂತಾರಾಷ್ಟ್ರೀಯ ಸಂಘಟನೆಗಳನ್ನು ಸಂಪರ್ಕಿಸಿ ಮನವಿ ಮಾಡುವುದು ಬಿಟ್ಟರೆ ನಮಗೆ ಬೇರೇನೂ ಉಳಿದಿಲ್ಲ. ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ, ಚೀನಾ, ರಷ್ಯಾ ದೇಶಗಳ ನೆರವನ್ನು ಸಹ ಕೇಳುತ್ತಿದ್ದೇವೆ, ಅಂತಾರಾಷ್ಟ್ರೀಯ ಸಮುದಾಯಗಳಿಂದಲೂ ಕಾಶ್ಮೀರ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ವಿಶ್ವ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶ ಮಾಡುವ ಬಗ್ಗೆ ನೀಡಿದ್ದ ಹೇಳಿಕೆ ಕುರಿತು, ಇಮ್ರಾನ್ ಖಾನ್, ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕಾ ಅಧ್ಯಕ್ಷರು ಮಧ್ಯೆಪ್ರವೇಶಿಸುತ್ತೇನೆ ಎಂದು ಹೇಳಿರುವುದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ, ಅವರು ಈ ಕೆಲಸ ಮಾಡುವುದಾದರೆ ಗಂಭೀರವಾಗಿ ಮಾಡಲಿ, ಕೆಲವೊಂದು ನಿರ್ಣಯಗಳು ಏಕಮುಖವಾಗುತ್ತದೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಮೆರಿಕಾ ಈ ಮೂಲಕ ಒತ್ತಡ ಹೇರಬಹುದು ಎಂದರು.


ಕಳೆದ ಆಗಸ್ಟ್ 16ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗೌಪ್ಯ ಸಭೆಯಲ್ಲಿ ಅಮೆರಿಕಾ, ಫ್ರಾನ್ಸ್, ರಷ್ಯಾದಂತಹ ಬಲಿಷ್ಠ ದೇಶಗಳು ಭಾರತವನ್ನು ಬೆಂಬಲಿಸಿದ್ದರೆ ಚೀನಾ ಮಾತ್ರ ಪಾಕಿಸ್ತಾನ ಪರವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com