ಆರ್ಥಿಕ ಸಂಕಷ್ಟ: ರಕ್ಷಣಾ ಬಜೆಟ್‌ ಕಡಿತಕ್ಕೆ ಪಾಕಿಸ್ತಾನ ಸೇನೆ ಒಪ್ಪಿಗೆ

ಪಾಕಿಸ್ತಾನ ರಾಷ್ಟ್ರ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Published: 06th June 2019 12:00 PM  |   Last Updated: 06th June 2019 11:37 AM   |  A+A-


In rare move, Pakistan Army agrees to budget cut amid economic woes

ಸಂಗ್ರಹ ಚಿತ್ರ

Posted By : SVN SVN
Source : Reuters
ಇಸ್ಲಾಮಾಬಾದ್‌: ಪಾಕಿಸ್ತಾನ ರಾಷ್ಟ್ರ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಪಾಕ್ ಸೇನೆ ಸ್ವಯಂ ಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದ್ದು, ಇದೊಂದು ಅಪರೂಪದ ವಿದ್ಯಮಾನ ಎಂದು ವರದಿ ಮಾಡಿದೆ. ಆದರೆ ವರದಿಯಲ್ಲಿ ಪಾಕ್ ಸೇನೆ ತನ್ನ ಬಜೆಟ್ ನಲ್ಲಿ ಎಷ್ಟು ಪ್ರಮಾಣದ ಕಡಿತಗೊಳಿಸಿದೆ ಎಂಬುದರ ಕುರಿತು ಸ್ಪಷ್ಟ ವರದಿ ದೊರೆತಿಲ್ಲ. ಪಾಕ್ ಸೇನೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಇಮ್ರಾನ್‌ ಖಾನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರದ ವೆಚ್ಚಗಳನ್ನು ಕಡಿತಗೊಳಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಜೂನ್‌ 11ರಂದು ಸರ್ಕಾರದ ಬಜೆಟ್‌ ಮಂಡನೆಯಾಗಲಿದೆ. ಸೇನೆ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳು ಖರ್ಚು ಕಡಿಮೆಗೊಳಿಸಲು ಸಹಕಾರ ನೀಡಲಿವೆ ಎಂದು ಪಾಕಿಸ್ತಾನ ಸರ್ಕಾರ ಕಳೆದ ತಿಂಗಳು ತಿಳಿಸಿತ್ತು.

ಅಂತೆಯೇ ಈ ಬಗ್ಗೆ ಪಾಕಿಸ್ತಾನ ಸೇನೆಯ ಮಾಧ್ಯಮ ಘಟಕದ ಮಹಾನಿರ್ದೇಶಕ ಮೇಜರ್‌ ಜನರಲ್‌ ಅಸೀಫ್‌ ಗಫೂರ್‌ ಕೂಡ ಟ್ವೀಟ್ ಮಾಡಿದ್ದು, 'ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳದೆಯೇ ರಕ್ಷಣಾ ವೆಚ್ಚ ಕಡಿತಗೊಳಿಸಲಾಗುವುದು. ಎಲ್ಲ ರೀತಿಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ಕೂಡ ಹೇಳಿಕೆ ನೀಡಿದ್ದು, 'ಇದು ಸಣ್ಣ ನಿರ್ಧಾರವಲ್ಲ. ಬಲಿಷ್ಠವಾದ ಸರ್ಕಾರ ಮತ್ತು ಸೇನೆ ನಡುವೆ ಸಮನ್ವಯ ಇದ್ದಾಗ ಮಾತ್ರ ಪಾಕಿಸ್ತಾನವನ್ನು ಆಡಳಿತ ಮತ್ತು ಆರ್ಥಿಕತೆಯ ಗಂಭೀರ ಸಮಸ್ಯೆಗಳಿಂದ ಪಾರು ಮಾಡಲು ಸಾಧ್ಯ’ ಎಂದು  ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌ ಮೆಚ್ಚುಗೆ
ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸೇನೆ ಕೈಗೊಂಡ ಕ್ರಮ ಶ್ಲಾಘನೀಯ. ಉಳಿತಾಯವಾಗುವ ಹಣವನ್ನು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಅಂತೆಯೇ 'ಮುಂದಿನ ಬಜೆಟ್‌ನಲ್ಲಿ ವೆಚ್ಚ ಕಡಿಮೆಗೊಳಿಸುವ ಪ್ರಸ್ತಾವಗಳಿವೆ. ಸರ್ಕಾರದ ವೆಚ್ವವನ್ನು ಸಾಧ್ಯವಾದಷ್ಟು ಕಡಿತಗೊಳಿಸಲು ಎಲ್ಲ ರೀತಿಯ  ಪ್ರಯತ್ನ ಮಾಡುತ್ತೇವೆ’ ಎಂದು ಪ್ರಧಾನಿ ಸಲಹೆಗಾರ ಹಫೀಜ್‌ ಶೇಖ್‌ ತಿಳಿಸಿದ್ದಾರೆ.

2018ರಲ್ಲಿ ಸೇನೆಯಿಂದ ಅತೀ ಹೆಚ್ಚು ವೆಚ್ಚ
2018ರಲ್ಲಿ 11.4 ಶತಕೋಟಿ ಡಾಲರ್‌ (789.34 ಶತಕೋಟಿ) ವೆಚ್ಚ ಮಾಡುವ ಮೂಲಕ ಪಾಕಿಸ್ತಾನ ಜಗತ್ತಿನಲ್ಲೇ ಅತಿ ಖರ್ಚು ಮಾಡಿದ 20ನೇ ದೇಶವಾಗಿತ್ತು. ಈ ಬಗ್ಗೆ ಸ್ಟಾಕ್‌ ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನೆ ಸಂಸ್ಥೆ ವರದಿ ಕೂಡ ಸಿದ್ಧಪಡಿಸಿತ್ತು. ಈ ವೆಚ್ಚವು ಪಾಕ್ ನ ಜಿಡಿಪಿಯ ಶೇ. 4ರಷ್ಟಿತ್ತು. ಜಗತ್ತಿನಲ್ಲೇ ಅಮೆರಿಕ ಸೇನೆಗಾಗಿ ಅತಿ ಹೆಚ್ಚು ಖರ್ಚು ಮಾಡುತ್ತದೆ. ಕಳೆದ ವರ್ಷ 649 ಡಾಲರ್‌ ಶತಕೋಟಿ (44936.76 ಶತಕೋಟಿ) ಅಮೆರಿಕ ವೆಚ್ಚ ಮಾಡಿತ್ತು. ಕಳೆದ ಒಂದು ದಶಕದಲ್ಲಿ ಸೇನೆಯ ವೆಚ್ಚ ಶೇಕಡ 17ರಷ್ಟು ಏರಿಕೆಯಾಗಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp