'ಪಾಕ್ ನಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇನ್ನು ಹಿಂದೂ, ಸಿಖ್ಖರು ಹೇಗೆ ಸುರಕ್ಷಿತ: ಭಾರತದ ಆಶ್ರಯ ಕೋರಿದ ಪಾಕ್ ರಾಜಕಾರಣಿ

ಪಾಕಿಸ್ತಾನದಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇನ್ನು ಹಿಂದೂ, ಸಿಖ್ಖರು ಹೇಗೆ ಸುರಕ್ಷಿತವಾಗಿರುತ್ತಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಮೂಲದ ರಾಜಕಾರಣಿ ಭಾರತದ ಆಶ್ರಯ ಕೋರಿದ್ದಾರೆ.

Published: 11th September 2019 08:36 AM  |   Last Updated: 11th September 2019 12:01 PM   |  A+A-


Pakistani politician Baladev kumar

ಪಾಕಿಸ್ತಾನದ ರಾಜಕಾರಣಿ ಬಲದೇವ್ ಕುಮಾರ್

Posted By : Srinivasamurthy VN
Source : ANI

ನವದೆಹಲಿ: ಪಾಕಿಸ್ತಾನದಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇನ್ನು ಹಿಂದೂ, ಸಿಖ್ಖರು ಹೇಗೆ ಸುರಕ್ಷಿತವಾಗಿರುತ್ತಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಮೂಲದ ರಾಜಕಾರಣಿ ಭಾರತದ ಆಶ್ರಯ ಕೋರಿದ್ದಾರೆ.

ಹೌದು.. ಸಿಖ್ ಸಮುದಾಯಕ್ಕೆ ಸೇರಿದ ಪಾಕಿಸ್ತಾನದ ರಾಜಕಾರಣಿ ಬಲದೇವ್ ಕುಮಾರ್ ಇಂತಹುದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಚ್ಚರಿ ಎಂದರೆ ಬಲದೇವ್ ಕುಮಾರ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಢಳಿತಾ ರೂಢ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಮುಖಂಡರಾಗಿದ್ದು, ಅವರದೇ ಸರ್ಕಾರದ ವಿರುದ್ಧ ಪರೋಕ್ಷ ಕಿಡಿಕಾರಿದ್ದಾರೆ.

ಪಾಕ್ ನಲ್ಲಿ ಈಗ ಸಿಖ್ ಮತ್ತು ಮುಸ್ಲಿಂ ಸಮುದಾಯ ಸುರಕ್ಷಿತವಾಗಿಲ್ಲ ಭಾರತದಲ್ಲಿ ಆಶ್ರಯ ಕೊಡಬೇಕೆಂದು ಬಲದೇವ್ ಕುಮಾರ್ ಮನವಿ ಮಾಡಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಳೆದ ತಿಂಗಳು ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಖಾನ್ನಾ ಗ್ರಾಮಕ್ಕೆ ಆಗಮಿಸಿದ ಬಲದೇವ್‌ ಕುಮಾರ್‌, 'ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪಾಕ್ ನಲ್ಲಿ ಈಗ ಮುಸ್ಲಿಮರು ಸಹ ಸುರಕ್ಷಿತವಾಗಿಲ್ಲ. ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಈಗ ಅಧಿಕಾರವಿದೆ. ಪಾಕಿಸ್ತಾನ ಸೇನೆಗೂ ಹೆಚ್ಚು ಅಧಿಕಾರವಿದೆ. ಅಲ್ಪಸಂಖ್ಯಾತರು ಅಲ್ಲಿ ಹೆಚ್ಚಿನ ಅಪಾಯದಲ್ಲಿದ್ದಾರೆ. ಇಡೀ ಪಾಕಿಸ್ತಾನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದು ಕಿಡಿಕಾರಿದರು.

ಇನ್ನು ಸಿಂಧ್‌ ಪ್ರಾಂತ್ಯದಲ್ಲಿ ಸಿಖ್‌ ಬಾಲಕಿ, ಯುವತಿಯರನ್ನು ಅಪಹರಿಸಿ ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ. ಇವೆಲ್ಲವನ್ನೂ ನೋಡಿ ನನಗೆ ಸಾಕಾಗಿದೆ. ಹಾಗಾಗಿ ನಮಗೆ ಭಾರತ ರಾಜಕೀಯ ಆಶ್ರಯ ನೀಡಬೇಕು, ನೆರವಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ತಮ್ಮದೇ ಪಕ್ಷದ ನಾಯಕ ಹಾಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧವೂ ಕಿಡಿಕಾರಿರುವ ಬಲದೇವ್ ಕುಮಾರ್, ''ಇಮ್ರಾನ್‌ ಖಾನ್‌ ಪ್ರಧಾನಿಯಾದಾಗ ಪಾಕಿಸ್ತಾನ ಬದಲಾಗಲಿದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿವೆ. ಅಲ್ಪಸಂಖ್ಯಾತರಿಗೆ ಅಲ್ಲಿ ಉಳಿಗಾಲವಿಲ್ಲ, ಎಂದು ಕುಮಾರ್ ಆತಂಕ ತೋಡಿಕೊಂಡಿದ್ದಾರೆ.

ಸ್ವಾತ್ ಪ್ರದೇಶದ ಮಾಜಿ ಶಾಸಕರಾದ ಪಾಕಿಸ್ತಾನ ತೆಹ್ರೇಕ್-ಇ-ಇನ್ಸಾಫ್ ನಾಯಕ ಬಲದೇವ್ ಕುಮಾರ್ ಅವರು ಸಿಖ್ ಜಾಥಾ (ಸಾಮಾಜಿಕ-ಧಾರ್ಮಿಕ ಗುಂಪು) ಯೊಂದಿಗೆ ಲೂಧಿಯಾನಕ್ಕೆ ಆಗಮಿಸಿ ಹಿಂದೆ ಉಳಿದಿದ್ದರು ಎಂದೂ ವರದಿಯಾಗಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp