ಕೊರೋನಾ ವೈರಸ್: ಭಾರತ Hydroxychloroquine ಅಮೆರಿಕಕ್ಕೆ ರಫ್ತು ಮಾಡದಿದ್ದರೆ ತಕ್ಕ ತಿರುಗೇಟು: ಡೊನಾಲ್ಡ್ ಟ್ರಂಪ್

ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದಿದ್ದರೆ, ಅಮೆರಿಕ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದಿದ್ದರೆ, ಅಮೆರಿಕ ಕೂಡ ಇದಕ್ಕೆ ತಕ್ಕ ತಿರುಗೇಟು ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ ಟ್ರಂಪ್, ಭಾರತಕ್ಕೆ ಅಮೆರಿಕದ ಬಗ್ಗೆ ತಿಳಿದಿದೆ. ಭಾರತ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡುತ್ತದೆ ಎಂಬ ವಿಶ್ವಾಸವಿದೆ.  ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಔಷಧಿ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕೇಳಿದ್ದೇನೆ. ಅಲ್ಲದೆ ಅಮೆರಿಕಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ರಫ್ತು ಮಾಡುವಂತೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಬಗ್ಗೆ  ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಒಂದು ವೇಳೆ ಭಾರತ ಔಷಧಿ ರಫ್ತು ಮಾಡದಿದ್ದರೂ ನಮಗೆ ಅಚ್ಚರಿಯೇನಿಲ್ಲ. ನಾವು ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದ್ದೇವೆ. ಅಂತೆಯೇ ಭಾರತಕ್ಕೆ ಈ ಕುರಿತ ತಕ್ಕ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.

ಔಷಧಿಗಾಗಿ ಭಾರತಕ್ಕೆ ಅಮೆರಿಕ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳ ಮನವಿ
ಇನ್ನು ಭಾರತ ಸರ್ಕಾರ ರಫ್ತು ನಿಷೇಧಿಸಿರುವ Hydroxychloroquine ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳು ಭಾರತಕ್ಕೆ ದುಂಬಾಲು ಬೀಳುತ್ತಿವೆ. ಈ ಹಿಂದೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ  ಮಾಡಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಟ್ರಂಪ್ ಬಳಿಕ ಇದೀಗ 30 ರಾಷ್ಟ್ರಗಳ ಪ್ರಧಾನಿಗಳು ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಮನವಿ ಮಾಡಿವೆ. ಕೊರೋನಾ ವೈರಸ್ ಗೆ  ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿಷೇಧ ಹೇರಿತ್ತು.

ಕೊರೋನಾ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ
ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಪಟ್ಟಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಮಲೇರಿಯಾ  ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು  ಯಾವುದೇ ವೈಜ್ಞಾನಿಕ ಸಂಶೋಧನೆ ಇದನ್ನು ಸಾಬೀತು ಮಾಡಿಲ್ಲ. ಆದರೆ ಫ್ರಾನ್ಲ್ ನಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಆ್ಯಂಟಿ ಬಯಾಟಿಕ್ ಮಾದರಿಯಲ್ಲಿ ನೀಡಲಾಗಿದ್ದು, ಇದು ರೋಗಿಗಳಲ್ಲಿ ಗಮನಾರ್ಹ ಸಕಾರಾತ್ಮಕ  ಬದಲಾವಣೆ ತಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಮುಖಸ್ಥಾನದಲ್ಲಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯು ನೊವೆಲ್ ಪಥಗಾನ್ ನಂತಹ ರೋಗಾಣುಗಳ ಮೇಲೆ ಪರಿಣಾಕಾರಿಯಾಗಿ  ಕಾರ್ಯನಿರ್ವಹಿಸುತ್ತದೆ. ಅಮೆರಿಕ ಮಾತ್ರವಲ್ಲದೇ ದಕ್ಷಿಣ ಕೊರಿಯಾ ಕೂಡ ಇದೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಕೊರೋನಾ ವೈರಸ್ ಗೆ ಬದಲಿ ಔಷಧಿಯಾಗಿ ನೀಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಪಂಚದಾದ್ಯಂತ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ವ್ಯಾಪಕ  ಬೇಡಿಕೆ ಸೃಷ್ಟಿಯಾಗಿದ್ದು, ಭಾರತ ಕೂಡ ಇದೇ ಕಾರಣಕ್ಕೆ ಈ ಔಷಧಿಯ ರಫ್ತು ನಿಷೇಧ ಮಾಡಿದೆ.

ಭಾರತದಲ್ಲಿಯೂ 550ಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು ಇದೀಗ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತು ನಿಷೇಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com