ಕೊರೋನಾ ವೈರಸ್ ನಿರೋಧಕ ಲಸಿಕೆಯಿಂದ ಮಾತ್ರ ಜಗತ್ತನ್ನು ಸಹಜ ಸ್ಥಿತಿಗೆ ತರಲು ಸಾಧ್ಯ: ವಿಶ್ವಸಂಸ್ಥೆ

ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆಯುತ್ತಿರುವ ಮಾರಕ ಕೊರೋನಾ ವೈರಸ್ ನಿಂದ ಜಗತ್ತನ್ನು ರಕ್ಷಿಸಿ ಮತ್ತೆ ಅದನ್ನು ಸಹಜ ಸ್ಥಿತಿಗೆ ತರಲು ಕೋವಿಡ್-19 ಲಸಿಕೆಯಿಂದ ಮಾತ್ರ ಸಾಧ್ಯ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್
Updated on

ವಾಷಿಂಗ್ಟನ್: ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆಯುತ್ತಿರುವ ಮಾರಕ ಕೊರೋನಾ ವೈರಸ್ ನಿಂದ ಜಗತ್ತನ್ನು ರಕ್ಷಿಸಿ ಮತ್ತೆ ಅದನ್ನು ಸಹಜ ಸ್ಥಿತಿಗೆ ತರಲು ಕೋವಿಡ್-19 ಲಸಿಕೆಯಿಂದ ಮಾತ್ರ ಸಾಧ್ಯ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಆಫ್ರಿಕಾದ ಸುಮಾರು ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು, 'ಬಹುಶಃ ಕೋವಿಡ್‌–19 ಲಸಿಕೆ ಮಾತ್ರವೇ  ಜಗತ್ತನ್ನು ಸಹಜ ಸ್ಥಿತಿಗೆ ಮರಳಿಸಬಲ್ಲದು. ಈ ವರ್ಷಾಂತ್ಯದೊಳಗೆ ವಿಜ್ಞಾನಿಗಳು ಅದನ್ನು ಕಂಡುಹಿಡಿಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

'ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯು ಜಗತ್ತನ್ನು ಸಾಮಾನ್ಯ ಸ್ಥಿತಿಗೆ ಹಿಂದಿರುಗಿಸಲು ಇರುವ ಏಕೈಕ ಸಾಧನ. ಈ ಒಂದು ಲಸಿಕೆ ಲಕ್ಷಾಂತರ ಜೀವಗಳನ್ನು ಮತ್ತು ಅವುಗಳ ಸರಪಳಿ ಜೈವಿಕ ಪರಿಸರವನ್ನು ಕಾಪಾಡಲಿದೆ ಮತ್ತು ಲೆಕ್ಕವಿಲ್ಲದಷ್ಟು ಹಣವನ್ನು ಉಳಿಸುತ್ತದೆ ಎಂದು  ಹೇಳಿದರು. ಇದೇ ವೇಳೆ ಜಾಗತಿಕ ಪಿಡುಗಿನ ನಿಯಂತ್ರಣಕ್ಕೆ ಸಾಮರಸ್ಯದಿಂದ ಕೈ ಜೋಡಿಸುವಂತೆ ಕರೆ ನೀಡಿದ ಅವರು, ಲಸಿಕೆಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಎಲ್ಲರೂ ಮಹತ್ವಾಕಾಂಕ್ಷೆಯಿಂದ ಪ್ರಯತ್ನ ಮಾಡಬೇಕು. 2020ರ ಅಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ  ದೊರೆಯುವಂತಾಗಬೇಕು ಎಂದು ಹೇಳುವ ಮೂಲಕ ವಿಶ್ವಕ್ಕೆ ಒಗ್ಗಟ್ಟಿನ ಮಂತ್ರ ಬೋಧಿಸಿದರು.

ಜಾಗತಿಕ ಪಿಡುಗಿನ ವಿರುದ್ಧ ವಿಶ್ವಸಂಸ್ಥೆಯ ಮಾನವೀಯ ಕಾರ್ಯಗಳಿಗಾಗಿ ರೂ 15 ಸಾವಿರ ಕೋಟಿ ದೇಣಿಗೆ ನೀಡುವಂತೆ ಗುಟೆರಸ್‌ ಮಾರ್ಚ್‌ 25 ರಂದು ಕರೆ ನೀಡಿದ್ದರು. ಆ ಬಗ್ಗೆ ಮಾತನಾಡಿದ ಅವರು, ಬೇಡಿಕೆ ಮೊತ್ತದ ಶೇ. 20 ರಷ್ಟು ದೇಣಿಗೆ ಇದುವರೆಗೆ ಸಂಗ್ರಹವಾಗಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮಾಣದ ದೇಣಿಗೆ ಸಂಗ್ರಹವಾಗುವ ವಿಶ್ವಾಸವಿದೆ ಎಂದು ಹೇಳಿದರು. ಅಂತೆಯೇ ಆಫ್ರಿಕಾದ 47 ಸದಸ್ಯ ರಾಷ್ಟ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಕೋವಿಡ್‌–19 ಪರೀಕ್ಷೆ ನಡೆಸಲು ಸಜ್ಜಾಗಿರುವುದಾಗಿಯೂ ತಿಳಿಸಿದ ಅವರು, ಸೋಂಕು  ನಿಯಂತ್ರಣಕ್ಕಾಗಿ ಆಫ್ರಿಕಾ‌ ಸರ್ಕಾರಗಳು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು. ಅದಕ್ಕೆ ಪೂರಕವಾಗಿ ಉಗಾಂಡದಲ್ಲಿ ಜನರು ಆದಾಯ ತೆರಿಗೆ ಮರುಪಾವತಿಗೆ ಹೆಚ್ಚುವರಿ ಸಮಯ ನಿಗದಿ ಪಡಿಸಿರುವುದು, ನಮೀಬಿಯಾದಲ್ಲಿ ಕೆಲಸ ಕಳೆದುಕೊಂಡವರಿಗಾಗಿ ತುರ್ತು ಆದಾಯ ಯೋಜನೆ  ರೂಪಿಸಿರುವುದು, ಕೇಪ್‌ ವೆರ್ಡ್‌ನಲ್ಲಿ ಆಹಾರ ನೆರವು ನೀಡುತ್ತಿರುವುದು ಮತ್ತು ಈಜಿಪ್ಟ್‌ನಲ್ಲಿ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ನೀಡಿರುವುದನ್ನು ಉಲ್ಲೇಖಿಸಿ ಸರ್ಕಾರಗಳ ಕಾರ್ಯವನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com