ಜಾಗತಿಕ ಪಿಡುಗಾಗಿ ಪರಿಣಮಿಸುತ್ತಿರುವ ಕೊರೋನಾ: ದಕ್ಷಿಣ ಕೊರಿಯಾ, ಇಟಲಿ, ಮಧ್ಯಪ್ರಾಚ್ಯಕ್ಕೂ ಹಬ್ಬಿದ ಮಾರಕ ವೈರಸ್

ಚೀನಾದಲ್ಲಿ 76,000 ಜನರಿಗೆ ತಗುಲಿ, ಈಗಾಗಲೇ 2345 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ನಿಧಾನಗತಿಯಲ್ಲಿ ಜಾಗತಿಕ ಪಿಡುಗಾಗಿ ಪರಿಣಮಿಸಲು ಆರಂಭಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಚೀನಾದಲ್ಲಿ 76,000 ಜನರಿಗೆ ತಗುಲಿ, ಈಗಾಗಲೇ 2345 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ನಿಧಾನಗತಿಯಲ್ಲಿ ಜಾಗತಿಕ ಪಿಡುಗಾಗಿ ಪರಿಣಮಿಸಲು ಆರಂಭಿಸಿದೆ. 

ಸೋಂಕು ನಿಯಂತ್ರಣಕ್ಕೆ ನಾನಾ ಕ್ರಮ ಕೈಗೊಂಡ ಹೊರತಾಗಿಯೂ ದಕ್ಷಿಣ ಕೊರಿಯಾ, ಇರಾನ್, ಯುಇಎ, ಇಟಲಿಯಲ್ಲಿ ದಿನೇ ದಿನೇ ಸೋಂಕಿಗೆ ತುತ್ತಾದವರು ಮತ್ತು ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಬೆಳವಣಿಗೆ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಆತಂಕವನ್ನು ಹುಟ್ಟುಹಾಕಿದೆ. 

ಈ ನಡುವೆ ಆರೋಗ್ಯ ಸೇವೆಗಳು ಅಷ್ಟೇನು ಹೇಳಿಕೊಳ್ಳುವ ಮಟ್ಟದಲ್ಲಿ ಇರದ ಆಫ್ರಿಕಾ ದೇಶಗಳಲ್ಲಿ ಸೋಂಕು ಎದುರಿಸಲು ಸಜ್ಜಾಗಿರುವ ಸ್ಥಿತಿಗತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. 

ಈ ಮೂಲಕ ಆ ರಾಷ್ಟ್ರಗಳಲ್ಲಿ ಈಗಾಗಲೇ ಸೋಂಕು ಹಬ್ಬಿದ್ದರೂ ಅದು ಗಮನಕ್ಕೆ ಬರದಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಸುಳಿವನ್ನು ನೀಡಿದೆ. 

ದಕ್ಷಇಣ ಕೊರಿಯಾದಲ್ಲಿ ಶನಿವಾರ ಒಂದೇ ದಿನ 142 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ ವೈರಸ್ ತಗಲಿದವರ ಸಂಖ್ಯೆ 346ಕ್ಕೆ ಏರಿದೆ. ಚೀನಾ ಹೊರತುಪಡಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿರುವ ಮತ್ತೊಂದು ದೇಶವಾಗಿ ಹೊರಹೊಮ್ಮಿರುವ ಕಾರಣ ದಕ್ಷಿಣ ಕೊರಿಯಾದಲ್ಲಿ ಭಾರೀ ಆತಂಕ ಕಂಡುಬಂದಿದೆ. ಇದೂವರೆಗೆ ಈ ದೇಶದಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. 

ಇನ್ನು ಇರಾನ್ ನಲ್ಲಿ 10 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಪೀಡಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿಗೆ ತುತ್ತಾಗಿದ್ದ ರೋಗಿಯೊಬ್ಬರು ಸಾವನ್ನಪ್ಪುವುದರೊಂದಿಗೆ 5 ಮಂದಿ ಸಾವನ್ನಪ್ಪಿದಂತಾಗಿದೆ. 

ಇಟಲಿಯ ಕೊಡೊಗ್ನೋ ಎಂಬ ಸಣ್ಣ ನಗರದಲ್ಲಿ ಕೊರೋನಾ ವೈರಸ್ ಶನಿವಾರ ಎರಡನೇ ಬಲಿ ಪಡೆದಿದೆ. ಇದು ಯುರೋಪ್ ನಲ್ಲಿ ಸೋಂಕಿಗೆ ಬಲಿಯಾದ ಮೊದಲ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಮೂವರು ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ತುರ್ತು ಕೊಠಡಿಯಿಂದ ದೂರ ಇರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. 

ಕೊಲ್ಲಿ ದೇಶ ಯುಎಇಯಲ್ಲಿ ಹೊಸದಾಗಿ ಇಬ್ಬರಲ್ಲಿ ಸೋಂಕು ತಗುಲಿದ್ದು, ಇದರೊಂದಿಗೆ ಒಟ್ಟು 11 ಮಂದಿ ಕೊರೋನಾದಿಂದ ಬಳಲುತ್ತಿರುವುದಾಗಿ ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com