ಅಧಿಕೃತ ತಾಲಿಬಾನ್ ಜಾಲತಾಣಗಳು ಸ್ಥಗಿತ: ಕಾರಣ ನಿಗೂಢ

ತಾಲಿಬಾನಿಗಳು ತಮ್ಮ ವಿಜಯ ಸಂದೇಶವನ್ನು, ಘೋಷಣೆಗಳನ್ನು ಅಧಿಕೃತ ಹೇಳಿಕೆಗಳನ್ನು ಈ ಜಾಲತಾಣಗಳಲ್ಲಿ ಪ್ರಕಟ ಮಾಡುತ್ತಿದ್ದರು. 
ಕಾಬೂಲ್ ಚೆಕ್ ಪೋಸ್ಟ್ ಒಂದರಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿ ಸೈನಿಕ
ಕಾಬೂಲ್ ಚೆಕ್ ಪೋಸ್ಟ್ ಒಂದರಲ್ಲಿ ಬಂದೂಕು ಹಿಡಿದು ನಿಂತ ತಾಲಿಬಾನಿ ಸೈನಿಕ

ಕಾಬೂಲ್: ತಾಲಿಬಾನಿಗಳ ಅಧಿಕೃತ ಜಾಲತಾಣಗಳು ಶುಕ್ರವಾರ ಏಕಾಏಕಿ ಸ್ಥಗಿತಗೊಂಡಿದೆ. ಅದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ತಾಲಿಬಾನಿಗಳು ತಮ್ಮ ವಿಜಯ ಸಂದೇಶವನ್ನು, ಘೋಷಣೆಗಳನ್ನು ಅಧಿಕೃತ ಹೇಳಿಕೆಗಳನ್ನು ಈ ಜಾಲತಾಣಗಳಲ್ಲಿ ಪ್ರಕಟ ಮಾಡುತ್ತಿದ್ದರು. 

ಸ್ಥಗಿತಗೊಂಡ ಜಾಲತಾಣಗಳು ಆಂಗ್ಲ ಭಾಷೆ ಮಾತ್ರವಲ್ಲದೆ ಪಾಷ್ತೊ, ಉರ್ದು, ಅರೇಬಿಕ್ ಮತ್ತು ದರಿ ಭಾಷೆಗಳಲ್ಲಿ ಕಾರ್ಯಾಚರಿಸುತ್ತಿದ್ದವು. ಈ ಜಾಲತಾಣಗಳಿಗೆ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕ್ಲೌಡ್ ಫ್ಲೇರ್ ಎನ್ನುವ ಸಂಸ್ಥೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತುಕೊಂಡಿತ್ತು. 

ತಾಲಿಬಾನಿ ಜಾಲತಾಣಗಳು ಸ್ಥಗಿತಗೊಂಡಿರುವುದಕ್ಕೆ ಇದುವರೆಗೂ ಕ್ಲೌಡ್ ಫ್ಲೇರ್ ಸಂಸ್ಥೆ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಜಾಲತಾಣಗಳನ್ನು ಯಾರು, ಯಾವ ಪ್ರದೇಶದಿಂದ ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಕ್ಲೌಡ್ ಫ್ಲೇರ್ ಸಂಸ್ಥೆ ಗೌಪ್ಯವಾಗಿರುಸುತ್ತದೆ. ಯಾರು ಬೇಕಾದರೂ ಕ್ಲೌಡ್ ಫ್ಲೇರ್ ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳಬಹುದು. ತಾಲಿಬಾನಿಗಳು ಕೂಡಾ ಕ್ಲೌಡ್ ಫ್ಲೇರ್ ಗ್ರಾಹಕರಲ್ಲೊಬ್ಬರಾಗಿದ್ದಾರೆ. 

ತಾಲಿಬಾನಿ ಜಾಲತಾಣಗಳನ್ನು ಬಲವಂತವಾಗಿ ಸ್ಥಗಿತಗೊಳಿಸಿರುವ ಸಾಧ್ಯತೆ ದಟ್ಟವಾಗಿದ್ದರೂ, ತಾಲಿಬಾನಿಗಳು ನೂತನ ವ್ಯವಸ್ಥೆ ಮಾಡಿಕೊಳ್ಳುವ ಸಲುವಾಗಿ ತಾತ್ಕಾಲಿಕವಾಗಿ ಜಾಲತಾಣ ಸ್ಥಗಿತಗೊಳಿಸಿರಬಹುದು ಎಂದೂ ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com