ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಇಲ್ಲ, ಅವರ ವರ್ತನೆಯನ್ನಾಧರಿಸಿ ಮುಂದಿನ ನಿರ್ಧಾರ: ಜೋ ಬೈಡನ್

ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮುಂದಿನ ನಿರ್ಧಾರ ಅವರ ವರ್ತನೆಯನ್ನಾಧರಿಸಿದೆ ಎಂದು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್
ಅಮೆರಿಕಾ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್: ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮುಂದಿನ ನಿರ್ಧಾರ ಅವರ ವರ್ತನೆಯನ್ನಾಧರಿಸಿದೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಅವರ ವಿರುದ್ಧ ಅಮೆರಿಕಾ ವಿಧಿಸಲಾಗಿರುವ ಕಠಿಣ ನಿರ್ಬಂಧಗಳನ್ನು ಕೈಬಿಡಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿರಾಕರಿಸಿದ್ದಾರೆ. ಕಾಬೂಲ್‌ನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಬಲವಂತವಾಗಿ ಪತನಗೊಳಿಸಿದ ನಂತರ ಹಲವಾರು ಭರವಸೆ ನೀಡಿರುವ ತಾಲಿಬಾನ್‌ಗಳ ನಡವಳಿಕೆಗಳು ನಿರ್ಬಂಧ ಸಡಿಲಿಕೆಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ. 

ಕೆಲವು ಷರತ್ತುಗಳಿಗೆ ಒಳಪಟ್ಟು ತಾಲಿಬಾನ್ ವಿರುದ್ಧದ ನಿರ್ಬಂಧಗಳನ್ನು ಮುಂದುವರಿಸಲಾಗುವುದೇ ಎಂದು ರೂಸ್ ವೆಲ್ಟ್‌ ಕೊಠಡಿಯಲ್ಲಿ ನಡೆದ ಸಮಾವೇಶದಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ "ಹೌದು" ಎಂದು ಬೈಡನ್‌ ಉತ್ತರಿಸಿದರು.

ನಿರ್ಬಂಧ ಸಡಿಲಿಕೆ ತಾಲಿಬಾನ್‌ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಭದ್ರತಾ ವಲಯವನ್ನು ಇನ್ನಷ್ಟು ವಿಸ್ತರಿಸಲಾಗುವುದು. ಆಗಸ್ಟ್‌ 31 ರೊಳಗೆ ಪೂರ್ಣಗೊಳ್ಳಲಿರುವ, ಸೇನಾ ಪಡೆಗಳ ವಾಪಸಾತಿ ಅವಧಿ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಅಮೆರಿಕಾ ಭದ್ರತಾ ಪಡೆಗಳೊಂದಿಗೆ ಚರ್ಚಿಸುತ್ತೇವೆ ಎಂದು ಅವರು ತಿಳಿಸಿದರು. 

ಇದಕ್ಕೂ ಮುನ್ನ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜೇಕ್ ಸುಲ್ಲಿವಾನ್ ಅವರು ಮಾತನಾಡಿ, ಕಾಬೂಲ್ ವಿಮಾನ ನಿಲ್ದಾಣದಿಂದ ನಾಗರೀಕರ ಸ್ಥಳಾಂತರ ಕಾರ್ಯಾಚರಣೆಗೆ ತಾಲಿಬಾನ್‌ ಅಡ್ಡಿಪಡಿಸಿದರೆ, ಅಮೆರಿಕಾ ಅವರಿಗೆ ತಕ್ಕ ಬುದ್ದಿ ಹೇಳಲಿದೆ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com