ಇಂಧನ ಪೂರೈಸುವಂತೆ ಇರಾನ್ ಗೆ ತಾಲಿಬಾನ್ ಮನವಿ
ಕಾಬೂಲ್: ಭದ್ರತಾ ದೃಷ್ಟಿಯಿಂದ ಅಫ್ಘಾನಿಸ್ತಾನಕ್ಕೆ ಇಂಧನ ಪೂರೈಕೆ ಮಾಡುವುದನ್ನು ಇರಾನ್ ನಿಲ್ಲಿಸಿತ್ತು. ದೇಶದಲ್ಲಿ ನಡೆಯುತ್ತಿದ್ದ ಯುದ್ಧ ಪರಿಸ್ಥಿತಿಯಿಂದಾಗಿ ಇಂಧನ ಪೂರೈಕೆ ಮಾಡುವುದು ಕಷ್ಟಕರವಾಗಿತ್ತಲ್ಲದೆ ಅಪಾಯಕಾರಿಯಾಗಿಯೂ ಪರಿಣಮಿಸಿತ್ತು.
ಇದೀಗ ಅಮೆರಿಕ ಅಫ್ಘಾನಿಸ್ತಾನದಿಂದ ಕಾಲ್ತೆಗೆಯುತ್ತಿರುವುದರಿಂದ ಹಾಗೂ ಹಳೆಯ ಆಫ್ಘನ್ ಸರ್ಕಾರ ಪದಚ್ಯುತಗೊಂಡಿರುವುದರಿಂದ ತಾಲಿಬಾನ್ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಶಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಇಂಧನ ಪೂರೈಕೆಯನ್ನು ಮುಂದುವರಿಸುವಂತೆ ತಾಲಿಬಾನ್ ಇರಾನ್ ಗೆ ಮನವಿ ಮಾಡಿದೆ.
ತಾಲಿಬಾನ್ ಮನವಿಗೆ ಪ್ರಕ್ರಿಯಿಸಿರುವ ಇರಾನ್ ಇಂಧನ ಇಂದಿನಿಂದಲೇ ಇಂಧನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.
ದೇಶದಲ್ಲಿ ಇಂಧನ ಬೆಲೆ ಏರಿರುವುದರಿಂದ ಇರಾನ್ ತನ್ನ ಗಡಿಯನ್ನು ವ್ಯಾಪಾರ ಉದ್ದೇಶಗಳಿಗಾಗಿ ತೆರೆದಿಡುವಂತೆಯೂ ತಾಲಿಬಾನ್ ಕೇಳಿಕೊಂಡಿದೆ.
ಈ ಹಿಂದೆ ಇರಾನ್ ತೈಲೋದ್ಯಮಕ್ಕೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಅಮೆರಿಕ ಮತ್ತು ಇರಾನ್ ನಡುವೆ ಸಂಬಂಧ ಹಳಸಿದ್ದರಿಂದ ಇರಾನ್ ತೈಲೋದ್ಯಮಕ್ಕೆ ನಷ್ಟ ಮಾಡುವ ಉದ್ದೇಶದಿಂದ ಅಮೆರಿಕ ಈ ಕ್ರಮ ಕೈಗೊಂಡಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯ ಇರಾನ್ ತೈಲ ಕೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಿದ್ದೂ ಹಲವು ರಾಷ್ಟ್ರಗಳು ಹಿಂಬಾಗಿಲಿನಿಂದ ಇರಾನ್ ತೈಲ ಖರೀದಿಸುತ್ತಿದ್ದವು. ಆದರೆ ತಾಲಿಬಾನ್ ಅಮೆರಿಕಕ್ಕೆ ಸೆಡ್ಡು ಹೊಡೆದು ಇರಾನ್ ಜೊತೆ ಮುಕ್ತವಾಗಿ ತೈಲ ರಫ್ತು ಮಾತುಕತೆ ನಡೆಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ