ಸತತ ಮೂರನೇ ದಿನವೂ ರಷ್ಯಾದಲ್ಲಿ ದಾಖಲೆಯ ಕೋವಿಡ್ ಸಾವು ವರದಿ
ಮಾಸ್ಕೋ: ಸತತ ಮೂರನೇ ದಿನವಾದ ಶುಕ್ರವಾರವೂ ದಾಖಲೆ ಸಂಖ್ಯೆಯ ಕೋವಿಡ್-19 ಸಾವುಗಳನ್ನು ರಷ್ಯಾದ ಅಧಿಕಾರಿಗಳು ವರದಿ ಮಾಡಿದ್ದಾರೆ. ಬುಧವಾರ 1,247 ಗುರುವಾರ 1,251 ಸಾವಿನ ಸಂಖ್ಯೆಯನ್ನು ವರದಿ ಮಾಡಿದ್ದ ರಷ್ಯಾ ಸ್ಟೇಟ್ ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ಶುಕ್ರವಾರ 1, 254 ಸಾವು ಕುರಿತು ವರದಿ ಮಾಡಿದೆ.
37, 156 ಹೊಸ ಸೋಂಕು ಪ್ರಕರಣಗಳನ್ನು ಟಾಸ್ಕ್ ಫೋರ್ಸ್ ವರದಿ ಮಾಡಿದೆ. ಇತ್ತೀಚಿನ ವಾರಗಳಲ್ಲಿ ದಿನನಿತ್ಯದ ಹೊಸ ಸೋಂಕುಗಳು ಇಳಿಮುಖವಾದ ಟ್ರೆಂಡ್ ನತ್ತ ಸಾಗಿದೆ. ಆದರೆ ಸೋಂಕು ಉಲ್ಬಣ ಹಿಂದಿಗಿಂತ ಈಗ ಹೆಚ್ಚಾಗುತ್ತಿದೆ.
ಮುಂಜಾಗ್ರತಾ ಕ್ರಮ ಅನುಸರಿಸುವಲ್ಲಿ ಜನರ ನಿರ್ಲಕ್ಷ್ಯ ಹಾಗೂ ಕಡಿಮೆ ಲಸಿಕಾ ದರದ ನಡುವೆ ಹೊಸದಾಗಿ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳಿಗಿಂತ ಹಲವು ತಿಂಗಳು ಮುಂಚಿತವಾಗಿಯೇ ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿದ್ದರೂ ರಷ್ಯಾದ ಸುಮಾರು 146 ಮಿಲಿಯನ್ ಜನರಲ್ಲಿ ಶೇಕಡಾ 40 ಕ್ಕಿಂತ ಕಡಿಮೆ ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.
ಒಟ್ಟಾರೆಯಾಗಿ, ಕೊರೋನಾವೈರಸ್ ಕಾರ್ಯಪಡೆ 9.2 ದಶಲಕ್ಷಕ್ಕೂ ಹೆಚ್ಚು ಸೋಂಕುಗಳನ್ನು ದೃಢಪಡಿಸಿದ್ದು, 261,000 ಕ್ಕೂ ಹೆಚ್ಚು ಕೋವಿಡ್-19 ಸಾವುಗಳನ್ನು ವರದಿ ಮಾಡಿದೆ. ಇದು ಯುರೋಪಿನಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ನಿಜವಾದ ಅಂಕಿ ಅಂಶವು ಇನ್ನೂ ಹೆಚ್ಚಿನದಾಗಿದೆ ಎಂದು ಕೆಲವು ತಜ್ಞರು ನಂಬುತ್ತಾರೆ. ಈ ವರ್ಷದ ಸೆಪ್ಟೆಂಬರ್ ಮತ್ತು ಏಪ್ರಿಲ್ 2020ರ ನಡುವೆ 462,000 ಜನರು ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ಅವರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ