ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖ

ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ನೇರವಾಗಿ, ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಆದ ಮಾತುಕತೆ ವೇಳೆ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ
ಪ್ರಧಾನಿ ಮೋದಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ

ವಾಷಿಂಗ್ಟನ್: ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ನೇರವಾಗಿ, ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಆದ ಮಾತುಕತೆ ವೇಳೆ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷ್ ವಿ ಶೃಂಗ್ಲ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಗುಂಪುಗಳು ಸಕ್ರಿಯವಾಗಿವೆ ಎಂಬುದನ್ನು ಒಪ್ಪಿಕೊಂಡ ಕಮಲಾ ಹ್ಯಾರಿಸ್ ಅವರು ಆಫ್ಘಾನಿಸ್ತಾನದಲ್ಲಿ ತಾಲಿಬಾನೀಯರಿಗೆ ಪಾಕಿಸ್ತಾನ ಬೆಂಬಲ, ಧೈರ್ಯ ನೀಡುತ್ತಿರುವ ವಿಷಯ ಕೂಡ ಚರ್ಚೆಗೆ ಬಂತು ಎಂದು ತಿಳಿಸಿದ್ದಾರೆ.

ಆಫ್ಘಾನಿಸ್ತಾನದ ಬೆಳವಣಿಗೆಗಳನ್ನು ಚರ್ಚಿಸುವ ವೇಳೆ ಪಾಕಿಸ್ತಾನದ ವಿಷಯ ಬಂತು. ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದನ್ನು ಕಮಲಾ ಹ್ಯಾರಿಸ್ ಅವರು ನೇರವಾಗಿ ಸ್ವಯಂಪ್ರೇರಿತವಾಗಿ ಉಲ್ಲೇಖಿಸಿದರು. ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಜಾಲ ಸಕ್ರಿಯವಾಗಿದೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಕಮಲಾ ಹ್ಯಾರಿಸ್ ಒತ್ತಾಯಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿ ಭಯೋತ್ಪಾದನೆಗೆ ಭಾರತ ಸಿಲುಕಿ ಹಲವು ದಶಕಗಳಿಂದ ಹೇಗೆ ತೊಂದರೆ ಅನುಭವಿಸುತ್ತಿದೆ ಎಂಬುದನ್ನು ಪ್ರಧಾನಿ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಮನವರಿಕೆ ಮಾಡಿದರು. ಇಂತಹ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಹೇಗೆ ಬೆಂಬಲ ನೀಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕು ಎಂಬುದನ್ನು ಕಮಲಾ ಹ್ಯಾರಿಸ್ ಪ್ರಸ್ತಾಪಿಸಿದರು.

ತಾಲಿಬಾನ್ ಉಗ್ರಗಾಮಿಗಳಿಗೆ ಪಾಕಿಸ್ತಾನ ನೆರವು ನೀಡುತ್ತಿರುವುದು ಜಗತ್ತಿಗೆ ತಿಳಿದಿದೆ. ಈ ತಿಂಗಳ ಆರಂಭದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಕೂಡ ತಾಲಿಬಾನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com