ಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆ

ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಪಾಕಿಸ್ತಾನ ಬೆಂಕಿ ಆರಿಸುವ ಸೋಗಲಾಡಿತನದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿರುವ ಇಮ್ರಾನ್ ಖಾನ್ ಗೆ ಭಾರತ ತಿರುಗೇಟು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಶ್ವಸಂಸ್ಥೆ: ಭಯೋತ್ಪಾದಕರಿಗೆ ಆಶ್ರಯ ಮತ್ತು ಬೆಂಬಲವನ್ನು ಪಾಕಿಸ್ತಾನ ನೀಡುತ್ತಿರುವುದರಿಂದ ಇಡೀ ವಿಶ್ವ ಅದರಿಂದ ನಲುಗಿ ಹೋಗುತ್ತಿದೆ. ತನ್ನ ನೆಲದಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಪಾಕಿಸ್ತಾನ ಬೆಂಕಿ ಆರಿಸುವ ಸೋಗಲಾಡಿತನದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿರುವ ಇಮ್ರಾನ್ ಖಾನ್ ಗೆ ಭಾರತ ತಿರುಗೇಟು ನೀಡಿದೆ.

ಎರಡು ದೇಶಗಳ ಆಂತರಿಕ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಿ ದೇಶದ ಮಾನವನ್ನು ಪಾಕಿಸ್ತಾನ ಹರಾಜು ಇಡಲು ನೋಡುತ್ತಿದೆ. ಇಂತಹ ಹೇಳಿಕೆಗಳು ನಮ್ಮ ಸಾಮೂಹಿಕ ತಿರಸ್ಕಾರಕ್ಕೆ ಮತ್ತು ಪದೇ ಪದೇ ಸುಳ್ಳನ್ನು ಹೇಳುವ ವ್ಯಕ್ತಿಯ ಮನಸ್ಥಿತಿ ಬಗ್ಗೆ ನಮಗೆ ಸಹಾನುಭೂತಿ ಮೂಡುತ್ತಿದ್ದರೂ, ದಾಖಲೆಗಳನ್ನು ಮುಂದಿಟ್ಟು ನಾವು ಮಾತನಾಡುತ್ತೇವೆ ಎಂದು ಯುವ ಭಾರತೀಯ ರಾಜತಾಂತ್ರಿಕರು ಹೇಳಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ತರಾಟೆಗೆ ತೆಗೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ 'ಭಯೋತ್ಪಾದನೆಯ ಬಲಿಪಶು' ಎಂದು ನಾವು ಕೇಳುತ್ತಲೇ ಇರುತ್ತೇವೆ. ಪಾಕಿಸ್ತಾನ ಹೊರಜಗತ್ತಿಗೆ ತಾನು ಒಳ್ಳೆಯ ಗುಣ ಇರುವ ದೇಶ ಎಂದು ತೋರಿಸುತ್ತಿದೆ. ನೆರೆಯ ದೇಶಕ್ಕೆ ಹಾನಿ ಮಾಡುವ ಉದ್ದೇಶದಿಂದ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳನ್ನು ಮತ್ತು ಭಯೋತ್ಪಾದಕರನ್ನು ಬೆಳೆಸುತ್ತಲೇ ಬಂದಿದೆ. ಪಾಕಿಸ್ತಾನದ ನೀತಿಯಿಂದಾಗಿ ಭಾರತ ಸೇರಿದಂತೆ ಇಡೀ ವಿಶ್ವ ಸಾಕಷ್ಟು ಬಳಲಿಹೋಗಿದೆ. ಮತ್ತೊಂದೆಡೆ, ಅವರು ತಮ್ಮ ದೇಶದಲ್ಲಿ ಪಂಥೀಯ ಹಿಂಸೆಯನ್ನು ಭಯೋತ್ಪಾದಕ ಕೃತ್ಯಗಳೆಂದು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿ ಮೊದಲ ಕಾರ್ಯದರ್ಶಿ ಸ್ನೇಹ ದುಬೆ ಹೇಳಿದ್ದಾರೆ.

2019ರ ಆಗಸ್ಟ್ 5ರಂದು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ತೆಗೆದುಹಾಕಿದ ಭಾರತ ಸರ್ಕಾರದ ನಿರ್ಧಾರವನ್ನು ಮತ್ತು ಪಾಕಿಸ್ತಾನ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಆಲಿ ಶಾ ಗಿಲಾನಿಯ ಸಾವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಅದಕ್ಕೆ ತಕ್ಕ ಪ್ರತಿಕ್ರಿಯಿಸಿರುವ ದುಬೆ, ಜಮ್ಮು-ಕಾಶ್ಮೀರ ಮತ್ತು ಲಡಾಕ್ ನ ಇಡೀ ಪ್ರಾಂತ್ಯ ಹಿಂದೆಯೂ, ಮುಂದೆಯೂ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಅಕ್ರಮವಾಗಿ ಪಡೆದುಕೊಂಡಿರುವ ಪ್ರದೇಶ ಕೂಡ ಇದರಲ್ಲಿ ಸೇರಿಕೊಂಡಿದೆ. ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶವನ್ನು ಖಾಲಿಮಾಡುವಂತೆ ಸಹ ದುಬೆ ಪಾಕಿಸ್ತಾನಕ್ಕೆ ಈ ಸಂದರ್ಭದಲ್ಲಿ ಕರೆ ನೀಡಿದರು.

ಇಮ್ರಾನ್ ಖಾನ್ ಮತ್ತು ಇತರ ಪಾಕಿಸ್ತಾನದ ನಾಯಕರು ಮತ್ತು ರಾಜತಾಂತ್ರಿಕರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ವಿಶ್ವ ಸಂಸ್ಥೆಯ ಇತರ ವೇದಿಕೆಗಳಲ್ಲಿ ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಆಂತರಿಕ ವಿಷಯಗಳನ್ನು ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ಪ್ರಯತ್ನಗಳು ಅಂತರರಾಷ್ಟ್ರೀಯ ಸಮುದಾಯ ಮತ್ತು ಸದಸ್ಯ ರಾಷ್ಟ್ರಗಳಿಂದ ಯಾವುದೇ ಬೆಂಬಲ, ಸಹಕಾರ ಪಡೆದಿಲ್ಲ, ಅವರು ಕಾಶ್ಮೀರವು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವಿಷಯವೆಂದು ಪ್ರತಿಪಾದಿಸುತ್ತಾರೆ.

ವಿಶ್ವಸಂಸ್ಥೆಯು ಒದಗಿಸಿದ ವೇದಿಕೆಗಳನ್ನು "ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡಲು" ಪಾಕ್ ನಾಯಕರು ದುರುಪಯೋಗಪಡಿಸಿಕೊಳ್ಳುವುದು ಇದೇ ಮೊದಲಲ್ಲ. ಇಂದು ಇಡೀ ಪ್ರಪಂಚ ಹಲವು ಬೇರೆ ದುಃಖದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥವಾಗಿ ಪಾಕ್ ಪ್ರಯತ್ನಿಸುತ್ತಿದೆ.ಪಾಕಿಸ್ತಾನದಲ್ಲಿ ಉಗ್ರರು ಸಕಲ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಅಲ್ಲಿ ಸಾಮಾನ್ಯ ಜನಜೀವನ ನಡೆಸುತ್ತಿರುವ ಅಲ್ಪಸಂಖ್ಯಾತ ಸಮುದಾಯದವರು ನಲುಗಿ ಹೋಗುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com