ಆಫ್ಘನ್ನರು ತಾಲಿಬಾನಿ ಆಡಳಿತವನ್ನು ಒಪ್ಪಿಕೊಳ್ಳಬೇಕು ಎಂದ ಅಶ್ರಫ್ ಘನಿ ಸಹೋದರ

ಸೋದರ ಅಶ್ರಫ್ ಘನಿ ದೇಶ ತೊರೆದಿದ್ದರ ಬಗ್ಗೆ ಹಷ್ಮತ್ ಘನಿ ಬೇಸರ ವ್ಯಕ್ತ ಪಡಿಸಿಲ್ಲ. ಆತ ಇಲ್ಲೇ ಇದ್ದಿದ್ದರೆ ಖಂಡಿತವಾಗಿ ಆತನ ಹತ್ಯೆಯಾಗುತ್ತಿತ್ತು. ಆಗ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು ಎಂದವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬೂಲ್: ಆಫ್ಘನ್ನರು ತಾಲಿಬಾನ್ ಆಡಳಿತವನ್ನು ಒಪ್ಪಿಕೊಳ್ಳಬೇಕು ಎಂದು ಹಷ್ಮತ್ ಘನಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹಷ್ಮತ್ ಘನಿ, ಇತ್ತೀಚಿಗಷ್ಟೇ ದೇಶ ಬಿಟ್ಟು ಪರಾರಿಯಾದ ಆಫ್ಗನ್ ಅಧ್ಯಕ್ಷ ಅಶ್ರಫ್ ಘನಿ ಅವರ ಕಿರಿಯ ಸಹೋದರ. ಹಷ್ಮತ್ ಘನಿ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನಡೆಸುವುದನ್ನು ತಾವು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ತಾಲಿಬಾನ್ ತಾನು ಸರ್ಕಾರ ರಚಿಸುವಾಗ ಎಲ್ಲರನ್ನೂ ಒಳಗೊಂಡು, ಆಫ್ಘನ್ನರ ಅಭಿಪ್ರಾಯಗಳನ್ನು ಗೌರವಿಸಿ ರಚಿಸಬೇಕು ಎಂದು ಕರೆ ನೀಡಿದ್ದಾರೆ.

ವಿದೇಶಿ ಸೈನಿಕರು ದೇಶ ತೊರೆದ ನಂತರ ಹೊಸ ಅಫ್ಘಾನಿಸ್ತಾನಕ್ಕೆ ಶಕ್ತಿಯುತವಾದ ಸರ್ಕಾರ ಬೇಕಿತ್ತು. ಅದು ಯಾವುದಾಗಿದ್ದರೂ ಸರಿಯೇ ಎಂದವರು ಅಭಿಪ್ರಾಯಪಟ್ಟಿದ್ದಾರೆ. 

ಸಹೋದರ ಅಶ್ರಫ್ ಘನಿ ದೇಶ ಬಿಟ್ಟು ಹೋಗಿದ್ದರೂ ಹಷ್ಮತ್ ಘನಿ ದೇಶ ತೊರೆದಿಲ್ಲ. ಅವರು ಪೂರ್ವ ಕಾಬೂಲಿನಲ್ಲಿನ ತಮ್ಮ ನಿವಾಸದಲ್ಲಿಯೇ ಇದ್ದಾರೆ. ಅವರು ಓರ್ವ ಉದ್ಯಮಿಯಾಗಿದ್ದು, ಕಳೆದ ಹಲವು ದಿನಗಳಿಂದ ತಾಲಿಬಾನಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. 

ದೇಶದ ಮೂಲ ಸೌಕರ್ಯಗಳು, ಶಾಲೆಗಳು, ಆಸ್ಪತ್ರೆಗಳು, ಅಂಗಡಿ ಮಳಿಗೆಗಳು ಸೇರಿದಂತೆ ಹಲವು ಉದ್ಯಮಗಳಲ್ಲಿ ಹೂಡಿಕೆ ನಡೆಸಿರುವ ಸಾವಿರಾರು ಉದ್ಯಮಿಗಳು ದೇಶ ತೊರೆಯಲು ನಿರ್ಧರಿಸಿದ್ದಾರೆ ಎನ್ನುವ ಕಳವಳಕಾರಿ ಮಾಹಿತಿಯನ್ನು ಅವರು ಹೊರಗೆಡವಿದ್ದಾರೆ. ಹಾಗೊಂದು ವೇಳೆ ಅವರು ದೇಶ ತೊರೆದಲ್ಲಿ ದೇಶಕ್ಕೆ ತೀವ್ರ ನಷ್ಟವಾಗುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅದರಿಂದ ಅಲ್ಲಿನ ವ್ಯವಸ್ಥೆ ಇನ್ನಷ್ಟು ಹದಗೆಡಲಿದೆ. ಅದರೆ ತಾವು ದೇಶ ತೊರೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಉದ್ಯಮಪತಿಗಳು ದೇಶವನ್ನು ತೊರೆಯದಂತೆ ಮಾಡಲು ಅವರು ಪ್ರಯತ್ನ ನಡೆಸುತ್ತಿದ್ದಾರೆ. 

ಇದೇ ವೇಳೆ ತಮ್ಮ ಸೋದರ ಅಶ್ರಫ್ ಘನಿ ದೇಶ ತೊರೆದಿದ್ದರ ಬಗ್ಗೆ ಅವರು ಬೇಸರ ವ್ಯಕ್ತ ಪಡಿಸಿಲ್ಲ. ಆತ ಇಲ್ಲೇ ಇದ್ದಿದ್ದರೆ ಖಂಡಿತವಾಗಿ ಆತನ ಹತ್ಯೆಯಾಗುತ್ತಿತ್ತು. ಆಗ ದೇಶದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು ಎಂದವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com