ಕೊರೊನಾ ಕಳಂಕದಿಂದ ಪಾರಾಗಲು ರ‍್ಯಾಪ್ ಹಾಡಿನ ಮೊರೆ ಹೋದ ಚೀನಾ 

ಕೊರೊನಾ ಮೂಲ ಪತ್ತೆ ಹಚ್ಚಲು ರಚನೆಯಾಗಿದ್ದ ಅಮೆರಿಕ ಸರ್ಕಾರದ ಸಮಿತಿ ಇದೀಗ ವರದಿ ನೀಡಲು ಸಿದ್ಧವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಅಮೆರಿಕ ವಿರುದ್ಧದ ರ‍್ಯಾಪ್ ಹಾಡನ್ನು ವೈರಲ್ ಮಾಡುವುದರಲ್ಲಿ ನಿರತವಾಗಿದೆ.
ಕೊರೊನಾ ಕಳಂಕದಿಂದ ಪಾರಾಗಲು ರ‍್ಯಾಪ್ ಹಾಡಿನ ಮೊರೆ ಹೋದ ಚೀನಾ 

ಬೀಜಿಂಗ್: ಕೊರೊನಾ ಮೂಲ ಎನ್ನುವ ಕಳಂಕದಿಂದ ಪಾರಾಗಲು ಚೀನಾ ಅಮೆರಿಕ ವಿರುದ್ಧ ರ‍್ಯಾಪ್ ಹಾಡೊಂದನ್ನು ಪ್ರಾಯೋಜಿಸಿ ಬಿಡುಗಡೆಗೊಳಿಸಿತ್ತು. ಕೊರೊನಾ ಮೂಲ ಪತ್ತೆ ಹಚ್ಚಲು ರಚನೆಯಾಗಿದ್ದ ಅಮೆರಿಕ ಸರ್ಕಾರದ ಸಮಿತಿ ಇದೀಗ ವರದಿ ನೀಡಲು ಸಿದ್ಧವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಅಮೆರಿಕ ವಿರುದ್ಧದ ರ‍್ಯಾಪ್ ಹಾಡನ್ನು ವೈರಲ್ ಮಾಡುವುದರಲ್ಲಿ ನಿರತವಾಗಿದೆ.

ಕೊರೊನಾ ವೈರಾಣು ಚೀನಾದ ವುಹಾನ್ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎನ್ನುವುದು ಜಗತ್ತಿನೆಲ್ಲೆಡೆ ಸದ್ಯ ಚಾಲ್ತಿಯಲ್ಲಿರುವ ಒಂದು ವಾದ. ಈ ವಾದದ ಸತ್ಯಾಸತ್ಯತೆ ಅರಿಯಲು ವಿಶ್ವ ಆರೋಗ್ಯ ಸಂಸ್ಥೆ ತನ್ನ ತಂಡವನ್ನೇ ವುಹಾನ್ ಗೆ ಕಳುಹಿಸಿತ್ತು. ಚೀನಾದ ವುಹಾನ್ ನಿಂದಲೇ ಕೊರೊನಾ ವೈರಾಣು ಹಬ್ಬಿದೆ ಎಂದು ಆ ತಂಡವೂ ಖಚಿತವಾಗಿ ಹೇಳಿಲ್ಲ. ಹೀಗಾಗಿಯೇ ಆ ಬಗ್ಗೆ ಊಹಾಪೋಹಗಳೇ ಇನ್ನೂ ನಮ್ಮ ನಡುವೆ ಹರಿದಾಡುವಂತಾಗಿದೆ. ಅಮೆರಿಕ ಮಾತ್ರ ಮೊದಲ ದಿನದಿಂದಲೂ ಕೊರೊನಾ ವೈರಾಣು ಸೋರಿಕೆ ಹಿಂದೆ ಚೀನಾ ಪಾತ್ರ ಇರುವುದಾಗಿ ಆರೋಪಿಸುತ್ತಲೇ ಬಂದಿದೆ.

ಜಗತ್ತಿನೆಲ್ಲೆಡೆ ಚೀನಾ ಕೈವಾಡದ ಕೊರೊನಾ ಥಿಯರಿ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಮೆರಿಕದ್ದು. ಆದರೆ ಪರಿಣತರ ವರದಿಯ ಕೊರತೆಯಿಂದಾಗಿ ವಿಜ್ಞಾನ ವಲಯ ಈ ವಾದವನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿತ್ತು. ಅದಕ್ಕಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇನ್ನು 90 ದಿನಗಳಲ್ಲಿ ಕೊರೊನಾ ಮೂಲದ ಬಗ್ಗೆ ತನಿಖೆ ನಡೆಸಲು ಗುಪ್ತಚರ ಇಲಾಖೆಗೆ ಮೇ ತಿಂಗಳಲ್ಲಿ ಆದೇಶಿಸಿದ್ದರು. ಈಗ ಆ ಸಮಿತಿ ವರದಿ ನೀಡುವ ಸಮಯ ಹತ್ತಿರ ಬರುತ್ತಿದೆ. ಹೀಗಾಗಿ ಚೀನಾ ಮೈಮೇಲೆ ದೆವ್ವ ಬಂದಂತೆ ಅಮೆರಿಕ ವಿರುದ್ಧ ಮುಸುಕಿನ ಯುದ್ಧ ಸಾರಿದೆ. ಚೀನಾ ತನ್ನ ದೇಶದಲ್ಲಿ ಕೊರೊನಾ ವೈರಾಣು ಅಮೆರಿಕದ ಡೀಟ್ರಿಕ್ ಪ್ರಯೋಗಾಲಯದಿಂದ ಸೋರಿಕೆಯಾಗಿದ್ದು ಎನ್ನುವ ಕಥೆಯನ್ನು ಕಟ್ಟಿ ಪ್ರಚಾರ ಮಾಡಿತ್ತು. ಈಗಲೂ ಚೀನದಲ್ಲಿ ಬಹಳಷ್ಟು ಮಂದಿ ಹಾಗೆಂದೇ ತಿಳಿದಿದ್ದಾರೆ. 

ಇದೀಗ ಅಮೆರಿಕ ಕೊರೊನಾ ಮೂಲದ ವರದಿ ಬಿಡುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾ ರ‍್ಯಾಪ್ ಹಾಡೊಂದನ್ನು ಬಿಡುಗಡೆಗೊಳಿಸಿದೆ. ಈ ಹಾಡು ಸರ್ಕಾರಿ ಪ್ರಾಯೋಜಿತ ಹಾಡು ಎಂದು ಹಲವರು ಆರೋಪಿಸಿದ್ದಾರೆ. ಈ ಹಾಡನ್ನು ಚೀನಾದ ನ್ಯಾಷನಲಿಸ್ಟ್ ಮ್ಯೂಸಿಕ್ ಬ್ಯಾಂಡ್ ಎಂದೇ ಹೆಸರಾದ ಸಿ.ಡಿ ರೆವ್ ತಂಡ ಸೃಷ್ಟಿಸಿದೆ. 'ಓಪನ್ ದಿ ಡೋರ್ ಟು ಡೀಟ್ರಿಕ್' ಎನ್ನುವ ಹೆಸರಿನ ಈ ಹಾಡನ್ನು ಚೀನಾದ ವಿದೇಶಾಂಗ ವಕ್ತಾರ ಲೀಜಿಯನ್ ಜಾವೊ ಸೇರಿದಂತೆ ಹಲವರು ಹಂಚಿಕೊಂಡಿದ್ದರು. ಡೀಟ್ರಿಕ್ ಪ್ರಯೋಗಾಲಯದ ಬಾಗಿಲನ್ನು ಜಗತ್ತಿನ ಮುಂದೆ ತೆರೆಯಿರಿ, ಅದರ ಒಳಗೆ ನೀವೇನು ಅಡಗಿಸಿದ್ದೀರಿ ಎನ್ನುವುದು ಜಗತ್ತಿಗೇ ತಿಳಿಯಲಿ ಎನ್ನುವ ಸಾಲುಗಳು ಈ ಹಾಡಿನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com