ತಾಲಿಬಾನ್ ವಶದಲ್ಲಿ ಕಂದಹಾರ್ ಜಿಲ್ಲೆ: ರಾಯಭಾರಿ ಕಚೇರಿ ಸಿಬ್ಬಂದಿ, ಅಧಿಕಾರಿಗಳ ವಾಪಸ್'ಗೆ ಭಾರತ ಕ್ರಮ

ತಾಲೀಬಾನ್ ಪಡೆಗಳು ಅಫ್ಗಾನಿಸ್ತಾನದ ಪ್ರಮುಖ ಪ್ರಾಂತ್ಯ ಎನಿಸಿದ ಕಂದಹಾರ್ ಜಿಲ್ಲೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಕಂದಹಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ 50 ರಾಜತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಸರ್ಕಾರಿ ಪಡೆಗಳೊಂದಿಗೆ ಭೀಕರ ಕಾದಾಟ ನಡೆಸಿದ ತಾಲೀಬಾನ್ ಪಡೆಗಳು ಅಫ್ಗಾನಿಸ್ತಾನದ ಪ್ರಮುಖ ಪ್ರಾಂತ್ಯ ಎನಿಸಿದ ಕಂದಹಾರ್ ಜಿಲ್ಲೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಲ್ಲೇ ಕಂದಹಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ 50 ರಾಜತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮುಂದಾಗಿದೆ ಎಂದು ತಿಳಿದುಬಂದಿದೆ. 

ಆಫ್ಗಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌, ದಕ್ಷಿಣ ಭಾಗದ ಪ್ರದೇಶಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಭಾರತ ತನ್ನ ರಾಯಭಾರಿ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಭಾರತೀಯ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯನ್ನು ವಾಪಸ್ ಕರೆತರಲು ಭಾರತೀಯ ವಾಯುಪಡೆಯ ವಿಶೇಷ ವಿಮಾನವನ್ನು ಶನಿವಾರ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕಳೆದ ಮಂಗಳವಾರವಷ್ಟೇ ಕಂದಹಾರ್‌ ಮತ್ತು ಮುಜಾರ್‌–ಎ–ಷರೀಫ್‌ನಲ್ಲಿರುವ ಕಾನ್ಸುಲೇಟ್ ಕಚೇರಿಗಳನ್ನು ಮುಚ್ಚುವ ಯೋಜನೆ ಇಲ್ಲ ಎಂದು ಹೇಳಿತ್ತು.

ಆಫ್ಗಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ವಿಷಯವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಗುರುವಾರವಷ್ಟೇ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ತಿಳಿಸಿದ್ದರು.

ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಫ್ಗಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯುವ ಘೋಷಣೆ ಮಾಡಿದ ನಂತರ ತಾಲೀಬಾನ್​ ದಾಳಿ ಹೆಚ್ಚಾಗಿದೆ. ಅಮೆರಿಕ ಪಡೆಗಳು ಅಫ್ಗನ್​ನಿಂದ ಹೊರನಡೆಯುವ ಪ್ರಕ್ರಿಯೆ ಅಂತಿಮಘಟ್ಟಕ್ಕೆ ಬರುತ್ತಿದ್ದಂತೆಯೇ ತಾಲೀಬಾನ್ ಗ್ರಾಮೀಣ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮುಂದಾಗಿದೆ.

ಶಾಂತಿ ಸ್ಥಾಪನೆ ಉದ್ದೇಶದಿಂದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ನೆಲೆಯೂರಿದ್ದ ಅಮೆರಿಕ ಮತ್ತು ಅದರ ಮಿತ್ರ ಪಡೆಗಳು ಕಾಬೂಲ್ ಸಮೀಪದ ಬಾರ್ಗಾಮ್ ವಾಯುನೆಲೆ ತೊರೆದ ಎರಡು ದಿನಗಳಲ್ಲಿ ತಾಲೀಬಾನ್ ಮೇಲುಗೈ ಸಾಧಿಸಿದೆ. 

ಅಮೆರಿಕ ಪಡೆಗಳು ವಾಪಸ್ಸಾಗುತ್ತಿದ್ದಂತೆಯೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರಣಿ ದಾಳಿ ನಡೆಸಿದ್ದು, ಕಂದಹಾರ್ ಜಿಲ್ಲೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಇದರಂತೆ ಕಂದಹಾರ್​ ದಕ್ಷಿಣದ ಪಂಜ್ವಾಯಿ ಜಿಲ್ಲೆ ಕೂಡ ತಾಲೀಬಾನ್ ಹಿಡಿತಕ್ಕೆ ಸಿಕ್ಕಿದೆ. 

ಪಂಜ್ವಾಯಿ ಜಿಲ್ಲೆಯನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ತಾಲೀಬಾನ್ ಬಹುಕಾಲದಿಂದ ಪ್ರಯತ್ನಿಸುತ್ತಿತ್ತು. ಪಂಜ್ವಾಯಿ ನಗರವು ತಾಲೀಬಾನ್ ವಶಕ್ಕೆ ಹೋದ ಹಿನ್ನೆಲೆಯಲ್ಲಿ ಅಲ್ಲಿಂದ ಸಾವಿರಾರು ಕುಟುಂಬಗಳು ಹೊರ ನಡೆಯತ್ತಿವೆ. ಪಂಜ್ವಾಯಿ ನಗರದಲ್ಲಿ ಶೀಘ್ರದಲ್ಲಿಯೇ ಇಸ್ಲಾಮಿಕ್ ಷರಿಯಾ ಕಾನೂನನ್ನು ತಾಲೀಬಾನ್ ಜಾರಿ ಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮತ್ತು ರಾಜ್ಯಪಾಲರ ಕಚೇರಿ ಕಟ್ಟಡವನ್ನು ತಾಲೀಬಾನ್ ವಶಪಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. 

ಪಂಜ್ವಾಯಿ ಜಿಲ್ಲೆಯು ತಾಲೀಬಾನ್​ ಹಿಡಿತಕ್ಕೆ ಸಿಕ್ಕ ಬಗ್ಗೆ ಕಂದಹಾರ್ ಪ್ರಾದೇಶಿಕ ಆಡಳಿತ ಮಂಡಳಿಯು ಸರ್ಕಾರಿ ಪಡೆಗಳನ್ನು ಹೊಣೆಯಾಗಿಸಿದೆ. ಅಮೆರಿಕ ಪಡೆಗಳು ಅಫ್ಗಾನಿಸ್ತಾನದಿಂದ ಹೊರ ನಡೆಯುವ ಪ್ರಕ್ರಿಯೆ ಆರಂಭವಾದ ನಂತರ ಸರ್ಕಾರಿ ಪಡೆಗಳು ಉದ್ದೇಶಪೂರ್ವಕವಾಗಿಯೇ ಯುದ್ಧಭೂಮಿಯಿಂದ ಹಿಂದೆ ಸರಿದವು ಎಂದು ಆಡಳಿತ ಮಂಡಳಿಯು ಆರೋಪಿಸಿದೆ. ಅಫ್ಗಾನಿಸ್ತಾನದ 421 ಜಿಲ್ಲೆಗಳ ಪೈಕಿ 100 ಜಿಲ್ಲೆಗಳನ್ನು ತಾಲೀಬಾನ್ ನಿಯಂತ್ರಿಸುತ್ತಿದೆ. ಕಂದಹಾರ್​ ಪ್ರಾಂತ್ಯದಲ್ಲಿ ತಾಲೀಬಾನ್ ವಶಕ್ಕೆ ಹೋದ ಐದನೇ ಜಿಲ್ಲೆಯಿದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com