ಭಾರತದಲ್ಲಿ ಪತ್ತೆಯಾದ ಕೊರೋನಾ ವೈರಸ್ ತಳಿಗಳ ಪೈಕಿ ಡೆಲ್ಟಾ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 B.1.617 'ಡೆಲ್ಟಾ' ರೂಪಾಂತರಿ ವೈರಸ್ ತಳಿಯೊಂದೇ ಪ್ರಸ್ತುತ ಅಪಾಯಕಾರಿಯಾಗಿ ಉಳಿದಿರುವ ಕೊರೊನಾ ವೈರಸ್‌ನ ಏಕೈಕ ರೂಪಾಂತರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನೇವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 B.1.617 'ಡೆಲ್ಟಾ' ರೂಪಾಂತರಿ ವೈರಸ್ ತಳಿಯೊಂದೇ ಪ್ರಸ್ತುತ ಅಪಾಯಕಾರಿಯಾಗಿ ಉಳಿದಿರುವ ಕೊರೊನಾ ವೈರಸ್‌ನ ಏಕೈಕ ರೂಪಾಂತರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಮಂಗಳವಾರ ಪ್ರಕಟವಾದ ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆ, B.1.617.1 ಮತ್ತು B.1.617.2 ವಂಶಾವಳಿಗಳಿಗೆ ಲಭ್ಯವಿರುವ ಸಂಶೋಧನೆಗಳನ್ನು ಆರಂಭದಲ್ಲಿ B.1.617 ಅನ್ನು ಜಾಗತಿಕ ವೇರಿಯಂಟ್ ಆಫ್ ಕನ್ಸರ್ನ್ (VOC)  (ಕಳವಳಕಾರಿ ರೂಪಾಂತರಿ ತಳಿ) ಎಂದು ಗೊತ್ತುಪಡಿಸಲು ಬಳಸಲಾಗುತ್ತಿದೆ. ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 B.1.617 'ಡೆಲ್ಟಾ' ತಳಿಯೊಂದೇ ಪ್ರಸ್ತುತ ಅಪಾಯಕಾರಿಯಾಗಿ ಉಳಿದಿರುವ ಕೊರೊನಾ ವೈರಸ್‌ನ ಏಕೈಕ ರೂಪಾಂತರಿಯಾಗಿದ್ದು, ಉಳಿದ ಎರಡು ತಳಿಗಳ ಪ್ರಭಾವ ಈಗ  ಕಡಿಮೆಯಾಗಿದೆ ಎಂದು ಹೇಳಿದೆ. ಅಂತೆಯೇ ಜೂನ್ 1 ರ ಹೊತ್ತಿಗೆ ಕೋವಿಡ್-19ನ ಡೆಲ್ಟಾ ರೂಪಾಂತರವು ವಿಶ್ವದ 62 ದೇಶಗಳಲ್ಲಿ ವರದಿಯಾಗಿದೆ. ಆದರೆ B.1.617.1 ಕಪ್ಪಾ ರೂಪಾಂತರ ತಳಿ ನಿರ್ದಿಷ್ಠ ಪ್ರದೇಶಗಳಲ್ಲಿ ಮಾತ್ರ ಕಂಡುಬಂದಿದೆ. ಭಾರತದಲ್ಲಿ ಎರಡನೆಯ ಅಲೆಯ ಭೀಕರತೆಗೆ ಕಾರಣವಾಗಿದ್ದು  B.1.617.2 ಡೆಲ್ಟಾ ವೈರಸ್ ಪ್ರಭೇದ ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಅಲ್ಲದೆ ಈ ರೂಪಾಂತರಗಳ ನಿಯಮಿತ ಮೇಲ್ವಿಚಾರಣೆ ಮತ್ತು ಮರು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲಾಗುತ್ತದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಡೆಲ್ಟಾ ರೂಪಾಂತರ ಅಪಾಯಕಾರಿ
ಇನ್ನು ಭಾರತ, ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಗಳನ್ನು ಮೂರು ವಿಭಿನ್ನ ತಳಿಗಳಾಗಿ ವಿಭಜಿಸಲಾಗಿತ್ತು. ಅವುಗಳ ಶಕ್ತಿ ಹಾಗೂ ಪರಿಣಾಮ ಕೂಡ ವಿಭಿನ್ನವಾಗಿತ್ತು. ಈ ಮೂರೂ ತಳಿಗಳನ್ನು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಕಳೆದ ವರ್ಷ 'ಕಳವಳಕಾರಿ ತಳಿ' (ವಿಒಸಿ) ಎಂದು  ಘೋಷಿಸಿತ್ತು. ಆದರೆ, ಮಂಗಳವಾರ ಅದು ತನ್ನ ಹೇಳಿಕೆಯನ್ನು ಪರಿಷ್ಕರಿಸಿದ್ದು, ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಕಂಡುಬಂದ ವೈರಸ್‌ಗಳನ್ನು ಈ ಪಟ್ಟಿಯಿಂದ ತೆಗೆದುಹಾಕಿದೆ. ಆದರೆ ಭಾರತದಲ್ಲಿ ಮೊದಲು ಪತ್ತೆಯಾದ ವೈರಸ್ ಮಾತ್ರವೇ ಆತಂಕಕಾರಿಯಾಗಿ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅಂತೇಯೆ ವಿಯೆಟ್ನಾಂನಲ್ಲಿ ಆರೋಗ್ಯ ಅಧಿಕಾರಿಗಳು ಶನಿವಾರ ಘೋಷಿಸಿರುವ ಹೈಬ್ರಿಡ್ ರೂಪಾಂತರವು ಡೆಲ್ಟಾ ತಳಿಯ ಮತ್ತೊಂದು ಪ್ರಭೇದದಂತೆ ಕಂಡುಬಂದಿದೆ ಎನ್ನಲಾಗಿದೆ.

ರೂಪಾಂತರ ತಳಿಗಳಿಗೆ ನಾಮಕರಣ
ಭಾರತದ ರೂಪಾಂತರ ತಳಿ ಎಂಬ ಹೆಸರಿಗೆ ವಿರೋಧ, ವೈಜ್ಞಾನಿಕ ಹೆಸರು ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್ ರೂಪಾಂತರವು ಮೊದಲು ಪತ್ತೆಯಾದ ದೇಶದ ಹೆಸರಿನೊಂದಿಗೇ ಅದನ್ನು ಗುರುತಿಸುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವೈರಸ್‌ ಗಳಿಗೆ ವೈಜ್ಞಾನಿಕ ಹೆಸರುಗಳನ್ನು ನೀಡಿದೆ. ಭಾರತದಲ್ಲಿ ಪತ್ತೆಯಾದ ತಳಿಗಳಿಗೆ ಡೆಲ್ಟಾ ಮತ್ತು ಕಪ್ಪಾ ಎಂದು ನಾಮಕರಣ  ಮಾಡಲಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೋವಿಡ್ ತಳಿಗೆ ಬೀಟಾ, ಬ್ರಿಟನ್ ನಲ್ಲಿ ಪತ್ತೆಯಾದ ತಳಿಗೆ ಆಲ್ಫಾ, ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಗಮ್ಮಾ ಮತ್ತು ಝೀಟಾ, ಅಮೆರಿಕದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್  ನಲ್ಲಿ ಪತ್ತೆಯಾದ ತಳಿಗೆ ಥೇಟಾ ಎಂದು ನಾಮಕರಣ ಮಾಡಿದೆ.  

ಜಾಗತಿಕವಾಗಿ ಕ್ಷೀಣಿಸುತ್ತಿರುವ ಹೊಸ ಸೋಂಕಿತರ ಸಂಖ್ಯೆ
ಇನ್ನು ಭಾರತವೂ ಸೇರಿದಂತೆ ಜಾಗತಿಕವಾಗಿ ಕೊರೋನಾ ವೈರಸ್ ಅಬ್ಬರ ಕ್ಷೀಣಿಸುತ್ತಿದ್ದು, ಕಳೆದೊಂದು ವಾರದಲ್ಲಿ ಭಾರತದಲ್ಲಿ 1,364,668 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.26ರಷ್ಟು ಕಡಿಮೆಯ ಆದರೂ ಜಾಗತಿಕ ಮಟ್ಟಕ್ಕೆ ಹೋಲಿಕೆ  ಮಾಡಿದರೆ ಈ ಪ್ರಮಾಣ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬ್ರೆಜಿಲ್ ನಲ್ಲೂ ಸೋಂಕು ಪ್ರಮಾಣ ತಗ್ಗಿದ್ದು, 420,981 ಹೊಸ ಪ್ರಕರಣಗಳು ದಾಖಲಾಗಿದ್ದು ಶೇ.7ರಷ್ಟು ತಗ್ಗಿದೆ. ಅರ್ಜೆಂಟೀನಾದಲ್ಲಿ 219,910 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಶೇ.3ರಷ್ಟು ಹೆಚ್ಚಳವಾಗಿದೆ.

ಇನ್ನು ಅಮೆರಿಕದಲ್ಲಿ 153,587 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಶೇ.18 ಇಳಿಕೆ ಮತ್ತು ಕೊಲಂಬಿಯಾದಲ್ಲಿ 150,517 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com