ವಿಶ್ವ ಆರೋಗ್ಯ ಸಂಸ್ಥೆಗೆ 3ನೇ ಹಂತದ ಲಸಿಕಾ ಪ್ರಯೋಗದ ದತ್ತಾಂಶ ಸಲ್ಲಿಸಿದ ಭಾರತ್ ಬಯೋಟೆಕ್; ಇಒಐಗೆ ಒಪ್ಪಿಗೆ

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆಯ ತುರ್ತುಬಳಕೆಯ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ದತ್ತಾಂಶ ಮತ್ತು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಿದೆ.
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ
Updated on

ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆಯ ತುರ್ತುಬಳಕೆಯ ಅನುಮತಿಗೆ ಕಾಯುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ದತ್ತಾಂಶ ಮತ್ತು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಿದೆ.

ಮಾರಕ ಕೊರೊನಾ ವೈರಸ್ ಕುರಿತಾದ ದೇಶೀ ಲಸಿಕೆ ಕೋವ್ಯಾಕ್ಸಿನ್ ಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡುವ ಭರವಸೆ ಹೆಚ್ಚಾಗಿದ್ದು, ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್‌ನ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಕೋವಾಕ್ಸಿನ್ ಅನುಮೋದನೆ ಪಡೆಯಲು ಭಾರತ್ ಬಯೋಟೆಕ್ ಕಂಪನಿಯು ಏಪ್ರಿಲ್ 19 ರಂದು ಇಒಐ ಅನ್ನು ಸಲ್ಲಿಸಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್ ನ ಇಒಐಗೆ ಒಪ್ಪಿಗೆ ನೀಡಿದ್ದು, ಈ ಸಂಬಂಧ ಜೂನ್ 23ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ತುರ್ತು ಅಗತ್ಯತೆ
ಇನ್ನು ಜಗತ್ತಿನಾದ್ಯಂತ ಬಹುತೇಕ ದೇಶಗಳು ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿದ್ದು, ಇನ್ನೂ ಸಾಕಷ್ಟು ದೇಶಗಳಿಗೆ ಲಸಿಕೆ ಪೂರೈಕೆಯಾಗಿಲ್ಲ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕಾ ಅನುಮೋದನೆ ಕಾರ್ಯವನ್ನು ತ್ವರಿತಗೊಳಿಸಬೇಕಿದೆ. ಹೀಗಾಗಿ  ಲಸಿಕೆ ಅನುಮೋದನೆಗೆ ಕಾಯುತ್ತಿರುವ ಸಂಸ್ಥೆಗಳು ಆಶಾವಾದದಲ್ಲಿದ್ದು, ಶೀಘ್ರದಲ್ಲೇ ತಮ್ಮ ತಮ್ಮ ಸಂಸ್ಥೆಯ ಲಸಿಕೆಗಳಿಗೆ ಅನುಮೋದನೆ ದೊರೆಯುವ ವಿಶ್ವಾಸ ವ್ಯಕ್ತಪಡಿಸುತ್ತಿವೆ, ಈ ಪಟ್ಟಿಯಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಕೂಡ ಈ ಪಟ್ಟಿಯಲ್ಲಿದೆ.

ಜುಲೈನಿಂದ ಸೆಪ್ಟೆಂಬರ್ ನಡುವೆ ಅನುಮೋದನೆ ಪಡೆಯುವ ನಿರೀಕ್ಷೆಯಿದೆ
ಮೂಲಗಳ ಪ್ರಕಾರ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡುವ ಪ್ರಕ್ರಿಯೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚಾಲ್ತಿಯಲ್ಲಿದ್ದು, ಜುಲೈ ಮತ್ತು ಸೆಪ್ಟೆಂಬರ್ ನಡುವೆ ತುರ್ತು ಬಳಕೆಯ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸುಮಾರು 60 ದೇಶಗಳಲ್ಲಿ  ಕೋವಾಕ್ಸಿನ್‌ಗೆ ನಿಯಂತ್ರಕ ಅನುಮೋದನೆ ಪ್ರಕ್ರಿಯೆ ನಡೆಯುತ್ತಿವೆ ಎಂದು ಕಂಪನಿ ತಿಳಿಸಿದೆ. ಇವುಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಕೂಡ ಇದ್ದು, ಇದುವರೆಗೆ ಭಾರತ ಸೇರಿದಂತೆ 13 ದೇಶಗಳಲ್ಲಿ ಅನುಮೋದನೆ ನೀಡಲಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

WHO ತುರ್ತು ಬಳಕೆಯ ಅನುಮೋದನೆಯ ಮಹತ್ವವೇನು?
ಸಾಂಕ್ರಾಮಿಕ ರೋಗದಂತಹ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಉತ್ಪನ್ನದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಡಬ್ಲ್ಯುಎಚ್‌ಒನ ತುರ್ತು ಬಳಕೆ ಪಟ್ಟಿ ಸಮಿತಿ ಪರಿಶೀಲಿಸುತ್ತದೆ. ಈ ಹಿಂದೆ 2020ರ ಡಿಸೆಂಬರ್ 31ರಂದು ಫೈಜರ್ ಸಂಸ್ಥೆಯ ಲಸಿಕೆಗೆ,  2021ರ ಫೆಬ್ರವರಿ 15ರಂದು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಮತ್ತು ಮಾರ್ಚ್ 12 ರಂದು ಜಾನ್ಸನ್ ಮತ್ತು ಜಾನ್ಸನ್‌ನ ಕೋವಿಡ್ ಲಸಿಕೆಗೆ WHO ತುರ್ತು ಬಳಕೆಯ ಅನುಮೋದನೆಯನ್ನು ನೀಡಿತ್ತು.

ಈ ಕುರಿತಂತೆ ಸ್ಪಷ್ಟನೆ ನೀಡಿದ್ದ ಡಬ್ಲ್ಯುಎಚ್‌ಒ, ತುರ್ತು ಪರಿಸ್ಥಿತಿಯ ದೃಷ್ಟಿಯಿಂದ, ಆದಷ್ಟು ಬೇಗ ಔಷಧಿಗಳು, ಲಸಿಕೆಗಳು ಮತ್ತು ರೋಗನಿರ್ಣಯ ಸಾಧನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅನುಮೋದಿಸುವುದು ಅವಶ್ಯಕ. ಅದೂ ಸುರಕ್ಷತೆ, ದಕ್ಷತೆ ಮತ್ತು ಗುಣಮಟ್ಟದ  ಮಾನದಂಡಗಳನ್ನು ಪೂರೈಸುವಾಗ. ಸಾಂಕ್ರಾಮಿಕ ಸಮಯದಲ್ಲಿ ಈ ಉತ್ಪನ್ನಗಳ ಉಪಯುಕ್ತತೆಯನ್ನು ಈ ಮೌಲ್ಯಮಾಪನವು ವ್ಯಾಪಕ ಶ್ರೇಣಿಯ ಜನರಿಗೆ ಖಾತ್ರಿಗೊಳಿಸುತ್ತದೆ ಎಂದು ಹೇಳಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com