ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದು ಡೋಸ್ ಎಲ್ಲಾ ಕೊರೋನಾ ವೈರಸ್ ತಳಿಗಳ ವಿರುದ್ಧ ಶೇ.80ರಷ್ಟು ಪರಿಣಾಮಕಾರಿ: ಅಧ್ಯಯನ
ಎಲ್ಲ ರೀತಿಯ ರೂಪಾಂತರಿ ಕೊರೋನಾ ವೈರಸ್ ತಳಿಗಳ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಶೇ.80ರಷ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ಹೇಳಿದೆ.
Published: 07th May 2021 12:13 AM | Last Updated: 07th May 2021 12:23 PM | A+A A-

ಸ್ಪುಟ್ನಿಕ್ ವಿ
ಮಾಸ್ಕೋ: ಎಲ್ಲ ರೀತಿಯ ರೂಪಾಂತರಿ ಕೊರೋನಾ ವೈರಸ್ ತಳಿಗಳ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಶೇ.80ರಷ್ಟು ಪರಿಣಾಮಕಾರಿ ಎಂದು ಅಧ್ಯಯನವೊಂದು ಹೇಳಿದೆ.
ಈ ಬಗ್ಗೆ ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಮಾಹಿತಿ ನೀಡಿದ್ದು, ಗುರುವಾರ ಲಸಿಕೆಗೆ ಅನುಮೋದನೆ ನೀಡಿದ ಬಳಿಕ ಈ ಮಾಹಿತಿ ನೀಡಿದೆ. ಒಂದು ಡೋಸ್ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯು ಎಲ್ಲ ರೀತಿಯ ಕೋವಿಡ್ ರೂಪಾಂತರಿ ವೈರಸ್ ಗಳಿಂದ ಶೇ.80ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.
ಮಾಸ್ಕೋದ ಗಮಲೆಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯು ಶೇಕಡಾ 79.4ರಷ್ಟು ಪರಿಣಾಮಕಾರಿಯಾಗಲಿದೆ. ಒಂದು ಡೋಸ್ ಸ್ಪುಟಿಕ್ ಲೈಟ್ ಲಸಿಕೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಲಾಗಿದೆ. ಇದು ಅತಿ ಹೆಚ್ಚು ಕೋವಿಡ್ ಸೋಂಕು ಹೊಂದಿರುವ ರಾಷ್ಟ್ರಗಳಿಗೆ ಆದಷ್ಟು ಬೇಗನೇ ಲಸಿಕೆ ಸರಬರಾಜು ಮಾಡಲು ನೆರವಾಗಲಿದೆ. ಮಾಸ್ಕೋದ ಗಮಲೇಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ, ಸ್ಲಿಮ್ಡ್-ಡೌನ್ ಲಸಿಕೆ, ಒಂದು ಡೋಸ್‌ಗೆ 10 ಡಾಲರ್ ಗಿಂತ ಕಡಿಮೆ ಖರ್ಚಾಗುತ್ತದೆ, ಇದನ್ನು ರಫ್ತುಗಾಗಿ ಮೀಸಲಿಡಲಾಗಿದ್ದು, ಭಾಗಶಃ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜನರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.
ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಘಾನಾ ಮತ್ತು ಇತರ ದೇಶಗಳಲ್ಲಿ 7,000 ಜನರನ್ನು ಒಳಗೊಂಡ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ ಎಂದು ಆರ್ಡಿಐಎಫ್ ತಿಳಿಸಿದೆ. ಈ ತಿಂಗಳ ಕೊನೆಯಲ್ಲಿ ಇದರ ಮಧ್ಯಂತರ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ರಷ್ಯಾದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಭಾಗವಾಗಿ, 2020 ಡಿಸೆಂಬರ್ ಹಾಗೂ 2021ರ ಏಪ್ರಿಲ್ ನಡುವೆ ಸ್ಪುಟಿಕ್ ಲೈಟ್ ಲಸಿಕೆಯ ಒಂದು ಡೋಸ್ ಹಾಕಿಸಿಕೊಂಡ 28 ದಿನಗಳ ಬಳಿಕ ನಡೆಸಿದ ಅಧ್ಯಯನದಲ್ಲಿ ಶೇಕಡಾ 79.4ರಷ್ಟು ಪರಿಣಾಮಕಾರಿ ಎಂಬುದು ಕಂಡುಬಂದಿದೆ. ಈ ಲಸಿಕೆ ಮಾನವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೊಡ್ಡ ಜನಸಮೂಹದಲ್ಲಿ ವೇಗವಾಗಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ, ಜೊತೆಗೆ ಈ ಹಿಂದೆ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿಯ ಉತ್ಪಾದನೆಗೆ ನೆರವು ನೀಡುತ್ತದೆ ಎಂದು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಹೇಳಿದ್ದಾರೆ.
ರಷ್ಯಾದ ಈ ಲಸಿಕೆಯನ್ನು 60 ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲು ಅನುಮೋದಿಸಲಾಗಿದ್ದು, ಆದರೆ ಇದನ್ನು ಇನ್ನೂ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಅಥವಾ ಯುನೈಟೆಡ್ ಸ್ಟೇಟ್ಸ್ ನ ಆಹಾರ ಮತ್ತು ಔಷಧ ಆಡಳಿತ (ಎಫ್ ಡಿಎ) ಅನುಮೋದಿಸಿಲ್ಲ.