ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಆತಂಕಕಾರಿ; ಪೇಟೆಂಟ್, ಆದಾಯದ ಕುರಿತು ಚಿಂತಿಸುವ ಸಮಯ ಇದಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಕೊರೊನಾವೈರಸ್‌ ಸಾಂಕ್ರಾಮಿಕದ ಎರಡನೇ ಅಲೆ ತೀವ್ರವಾಗಿದ್ದು, ಕೋವಿಡ್ ಪರಿಸ್ಥಿತಿ ಆತಂಕಕಾರಿಯಾಗಿದೆ. ಈ ಹೊತ್ತಿನಲ್ಲಿ 'ಪೇಟೆಂಟ್, ಆದಾಯದ ಕುರಿತು ಚಿಂತಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡಾ.ಸೌಮ್ಯ ಸ್ವಾಮಿನಾಥನ್
ಡಾ.ಸೌಮ್ಯ ಸ್ವಾಮಿನಾಥನ್

ಜಿನೀವಾ: ಭಾರತದಲ್ಲಿ ಕೊರೊನಾವೈರಸ್‌ ಸಾಂಕ್ರಾಮಿಕದ ಎರಡನೇ ಅಲೆ ತೀವ್ರವಾಗಿದ್ದು, ಕೋವಿಡ್ ಪರಿಸ್ಥಿತಿ ಆತಂಕಕಾರಿಯಾಗಿದೆ. ಈ ಹೊತ್ತಿನಲ್ಲಿ 'ಪೇಟೆಂಟ್, ಆದಾಯದ ಕುರಿತು ಚಿಂತಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು, 'ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ದೇಶದಲ್ಲಿ ನಿಖರವಾದ ಅಂಕಿ-ಅಂಶಗಳನ್ನು ಅಂದಾಜಿಸಲು ಸರ್ಕಾರ  ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ. 

'ಸದ್ಯ ಭಾರತದಲ್ಲಿನ ಕೊರೋನಾ ಸೋಂಕು ಸಾಂಕ್ರಾಮಿಕ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಭಾರತ ಮತ್ತು ಆಗ್ನೇಯ ದೇಶಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು, ದೈನಂದಿನ ಸಾವಿನ ಸಂಖ್ಯೆ ತುಂಬಾ ಕಳವಳಕಾರಿಯಾಗಿದೆ. ಈ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗುತ್ತಿದ್ದು, ಇಷ್ಟು ಪ್ರಮಾಣದ  ಪ್ರಕರಣಗಳನ್ನು ನಾವು ಅಂದಾಜಿಸಿರಲಿಲ್ಲ. ಪ್ರಪಂಚದ ಪ್ರತಿಯೊಂದು ದೇಶವೂ ಸೋಂಕು ಮತ್ತು ಸಾವಿನ ಪ್ರಕರಣಗಳನ್ನು ನಿಜವಾದ ಸಂಖ್ಯೆಗಿಂತ ಕಡಿಮೆ ಅಂದಾಜಿಸಿದ್ದವು. ಸರ್ಕಾರಗಳು ನಿಖರವಾದ ಸಂಖ್ಯೆಯನ್ನು ವರದಿ ಮಾಡಲು ಅಭ್ಯಾಸಗಳನ್ನು ಹೆಚ್ಚಿಸಬೇಕು. ಇದು (ನಿಖರ ಅಂಕಿ–ಅಂಶದ ಅಂದಾಜು)  ಆಗಲೇಬೇಕು ಮತ್ತು ಆ ಬಗ್ಗೆ ನಾವು ಅರಿವು ಹೊಂದಿರಲೇಬೇಕು. ಏಕೆಂದರೆ, ಉತ್ತಮ ಅಂಕಿ-ಅಂಶ ಮತ್ತು ಉತ್ತಮ ನೀತಿಗಳು ಏನಾಗುತ್ತಿದೆ ಎಂಬುದರತ್ತ ನಿರ್ದೇಶನ ನೀಡಬಹುದು. ನೆನಪಿರಲಿ, ಜನರು ಕೇವಲ ಕೋವಿಡ್‌ನಿಂದಲೇ ಮೃತಪಡುತ್ತಿಲ್ಲ. ಆರೋಗ್ಯಸೇವೆ ಪಡೆದುಕೊಳ್ಳಲಾಗದೆ ಇತರೆ  ಖಾಯಿಲೆಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆʼ ಎಂದೂ ಅವರು ಎಚ್ಚರಿಸಿದ್ದಾರೆ.

ಸೋಂಕು ಪ್ರಸರಣ ಹೆಚ್ಚಳಕ್ಕೆ ವೈರಸ್ ರೂಪಾಂತರ ಕಾರಣ
ಅಂತೆಯೇ ದೇಶದಲ್ಲಿನ ಸೋಂಕು ಪ್ರಸರಣ ಹೆಚ್ಚಳಕ್ಕೆ ಕೊರೋನಾ ವೈರಸ್ ರೂಪಾಂತರವೇ ಕಾರಣ ಎಂದು ಹೇಳಿರುವ ಅವರು, 'ರೂಪಾಂತರ ವೈರಸ್‌ನ ಹರಡುವಿಕೆ, ಅದರಿಂದ ಆಗುವ ರೋಗದ ತೀವ್ರತೆ, ಲಸಿಕೆ ಪಡೆದುಕೊಂಡವರಲ್ಲಿನ ಪ್ರತಿಕಾಯ ಪ್ರತಿಕ್ರಿಯೆಗಳ ಬಗ್ಗೆ ಭಾರತದಲ್ಲಿ ಅಧ್ಯಯನ ನಡೆಯುತ್ತಿದೆ.  ದೇಶದ ವಿವಿಧ ಪ್ರದೇಶಗಳಲ್ಲಿನ ಸಂಪೂರ್ಣ ಚಿತ್ರಣದ ಮಾಹಿತಿ ಕಲೆಹಾಕಬೇಕಬೇಕೆಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಸೋಂಕು ತಡೆಯುವಲ್ಲಿ ಲಸಿಕೆಗಳು ಸಮರ್ಥವಾಗಿದೆ
ಇದೇ ವೇಳೆ ಕೊರೋನಾ ಸೋಂಕು ತಡೆಯುವಲ್ಲಿ ಹಾಲಿ ಲಭ್ಯವಿರುವ ಲಸಿಕೆಗಳು ಸಮರ್ಥವಾಗಿದೆ. ವಿಶ್ವದ ಕೋವಿಡ್-19 ವೈರಸ್ ನ ಪ್ರತಿಯೊಂದು ರೂಪಾಂತರದ ವಿರುದ್ಧವೂ ಲಸಿಕೆಗಳು ಬಹಳ ಪರಿಣಾಮಕಾರಿಯಾಗಿವೆ. ತೀವ್ರವಾದ ಕಾಯಿಲೆ ಮತ್ತು ಆಸ್ಪತ್ರೆಗೆ ಕಾರಣವಾಗುವುದರ ವಿರುದ್ಧ ಇದು ಅತ್ಯಂತ ಪರಿಣಾಮಕಾರಿ. ಆದರೆ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದೂ ಹೇಳಿದ್ದಾರೆ.

ಪೇಟೆಂಟ್, ಆದಾಯದ ಕುರಿತು ಚಿಂತಿಸುವ ಸಮಯ ಇದಲ್ಲ
ಅಂತೆಯೇ ಲಸಿಕೆಗಳ ಮೇಲಿನ ಪೇಟೆಂಟ್ ಗೆ ಅರ್ಜಿ ಸಲ್ಲಿಸದ ಕುರಿತು ಅಮೆರಿಕದ ನಿರ್ಧಾರವನ್ನು ಬೆಂಬಲಿಸಿರುವ ಸೌಮ್ಯ ಸ್ವಾಮಿನಾಥನ್ ಅವರು, ಪೇಟೆಂಟ್, ಆದಾಯದ ಕುರಿತು ಚಿಂತಿಸುವ ಸಮಯ ಇದಲ್ಲ. ಇಡೀ ಜಗತ್ತೇ ಮಾಹಾಮಾರಿಯ ಆರ್ಭಟಕ್ಕೆ ತುತ್ತಾಗಿದೆ. ಇಡೀ ಜಗತ್ತು ಒಗ್ಗೂಡಿ ಕೊರೋನಾ ಸಾಂಕ್ರಾಮಿಕದ ವಿರುದ್ಧ ಒಗ್ಗೂಡಿ ಹೋರಾಡಬೇಕಿದೆ. ಇಲ್ಲಿ ಯಾವುದೇ ರೀತಿಯ ಲಾಭದ ವಿಚಾರ ಬರಬಾರದು ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com