ಬ್ರಿಕ್ಸ್‌ನ ಅಧ್ಯಕ್ಷತೆಯಲ್ಲಿ ಭಾರತದ ಕೊಡುಗೆಗಳನ್ನು ಗುರುತಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ: ಚೀನಾ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ 13ನೇ ಬ್ರಿಕ್ಸ್ ಶೃಂಗಸಭೆ ಮುಕ್ತಾಯಗೊಂಡಿದ್ದು ಒಕ್ಕೂಟದ ಒಂದು ವರ್ಷದ ಅಧ್ಯಕ್ಷತೆಯಲ್ಲಿ ಭಾರತದ ಕೊಡುಗೆಗಳನ್ನು ಚೀನಾ ಗುರುತಿಸುತ್ತದೆ ಮತ್ತು ಪ್ರಶಂಸಿಸುತ್ತದೆ ಎಂದು ಹೇಳಿದೆ.
Published: 10th September 2021 08:55 PM | Last Updated: 10th September 2021 08:55 PM | A+A A-

ಝಾವೊ ಲಿಜಿಯಾನ್
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ 13ನೇ ಬ್ರಿಕ್ಸ್ ಶೃಂಗಸಭೆ ಮುಕ್ತಾಯಗೊಂಡಿದ್ದು ಒಕ್ಕೂಟದ ಒಂದು ವರ್ಷದ ಅಧ್ಯಕ್ಷತೆಯಲ್ಲಿ ಭಾರತದ ಕೊಡುಗೆಗಳನ್ನು ಚೀನಾ ಗುರುತಿಸುತ್ತದೆ ಮತ್ತು ಪ್ರಶಂಸಿಸುತ್ತದೆ ಎಂದು ಹೇಳಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಐದು ಸದಸ್ಯರ ಗುಂಪಿನ ಅಧ್ಯಕ್ಷತೆ ವರ್ಷಕ್ಕೆ ಒಂದು ಬಾರಿ ಬದಲಾಗುತ್ತದೆ. ಈ ಬಾರಿ ಭಾರತ ಅಧ್ಯಕ್ಷತೆ ವಹಿಸಿತ್ತು.
ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ಅವರು ಎರಡನೇ ಬಾರಿಗೆ ವಹಿಸಿದ್ದರು. ಈ ಹಿಂದೆ ಮೋದಿ 2016ರಲ್ಲಿ ಗೋವಾ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದರು. 14ನೇ ಬ್ರಿಕ್ಸ್ ಶೃಂಗಸಭೆಯನ್ನು ಮುಂದಿನ ವರ್ಷ ಚೀನಾ ಆಯೋಜಿಸುತ್ತಿದೆ.
ಬ್ರಿಕ್ಸ್ ಪಾಲುದಾರಿಕೆ ಮತ್ತು ಭಾರತದ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಒಕ್ಕೂಟವು ಸಾಧಿಸಿದ ವಿಭಿನ್ನ ಒಪ್ಪಂದಗಳ ಕುರಿತು ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು, ಕಳೆದ ವರ್ಷದಲ್ಲಿ ಅದರ ಅಧ್ಯಕ್ಷತೆಯಲ್ಲಿ ಭಾರತದ ಕೊಡುಗೆಗಳನ್ನು ನಾವು ಗುರುತಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ ಎಂದರು.
ಗುರುವಾರ ವರ್ಚುವಲ್ ಮೂಲಕ ಶೃಂಗಸಭೆಯಲ್ಲಿ ಭಾಗವಹಿಸಿದ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಮುಂದಿನ ವರ್ಷ ತನ್ನ ಅಧ್ಯಕ್ಷತೆಯಲ್ಲಿ, ಚೀನಾ ಬ್ರಿಕ್ಸ್ ಪಾಲುದಾರರೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢವಾಗಿಸಲು ಮತ್ತು ಹೆಚ್ಚು ಫಲಿತಾಂಶ-ಆಧಾರಿತ ಪಾಲುದಾರಿಕೆಯನ್ನು ನಿರ್ಮಿಸಲು ಎದುರು ನೋಡುತ್ತಿದೆ ಎಂದು ಹೇಳಿದರು
ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಕೂಡ ಭಾಗವಹಿಸಿದ್ದರು.