ನ್ಯಾನ್ಸಿ ಪೆಲೊಸಿ ಭೇಟಿಗೆ ವಿರೋಧ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ

ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡುತ್ತಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ಚೀನಾ, ತೈವಾನ್‌ನಿಂದ ಹಣ್ಣು ಮತ್ತು ಮೀನುಗಳ ಆಮದಿನ ಮೇಲೆ ಬುಧವಾರ ನಿರ್ಬಂಧ ಹೇರಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೀಜಿಂಗ್: ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡುತ್ತಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ಚೀನಾ, ತೈವಾನ್‌ನಿಂದ ಹಣ್ಣು ಮತ್ತು ಮೀನುಗಳ ಆಮದಿನ ಮೇಲೆ ಬುಧವಾರ ನಿರ್ಬಂಧ ಹೇರಿದೆ.

ತೈವಾನ್‌ಗೆ ಪೆಲೋಸಿ ಪ್ರವಾಸವು ರಾಜತಾಂತ್ರಿಕ ಬಿರುಗಾಳಿಯನ್ನು ಹೊತ್ತಿಸಿದ್ದು, ತೈವಾನ್‌ನ ಹಲವು ಆಹಾರೋತ್ಪನ್ನ ಕಂಪನಿಗಳಿಂದ ಮಂಗಳವಾರವೇ ಚೀನಾ ಆಮದನ್ನು ನಿಲ್ಲಿಸಿರುವುದನ್ನು ತೈವಾನ್‌ನ ಕೃಷಿ ಮಂಡಳಿ ಕೂಡ ಖಚಿತಪಡಿಸಿದೆ.

ಚೀನಾದ ತೀವ್ರ ವಿರೋಧದ ನಡುವೆಯೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಅಮೆರಿಕದ ವಿಶೇಷ ವಿಮಾನದಲ್ಲಿ ಮಂಗಳವಾರ ತೈವಾನ್ ರಾಜಧಾನಿ ತೈಪೆ ತಲುಪಿದ್ದಾರೆ.

ಪ್ರತ್ಯೇಕ ನೋಟಿಸ್‌ನಲ್ಲಿ, ಚೀನಾದ ವಾಣಿಜ್ಯ ಸಚಿವಾಲಯವು ಯಾವುದೇ ವಿವರಗಳನ್ನು ನೀಡದೆಯೇ ಬುಧವಾರದಿಂದ 'ತೈವಾನ್‌ಗೆ ನೈಸರ್ಗಿಕ ಮರಳನ್ನು ರಫ್ತು ಮಾಡುವುದನ್ನು ಸ್ಥಗಿತಗೊಳಿಸುವುದಾಗಿ' ಹೇಳಿದೆ.

ಚೀನಾ, ತೈವಾನ್‌ನ ಮೇಲೆ ಕಣ್ಣಿಟ್ಟಿರುವುದು ಇದೇ ಮೊದಲಲ್ಲ. ಕ್ರಿಮಿಕೀಟಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿ ಚೀನಾ 2021ರ ಮಾರ್ಚ್‌ನಲ್ಲಿ ದ್ವೀಪ ರಾಷ್ಟ್ರದಿಂದ ಅನಾನಸ್ ಆಮದನ್ನು ನಿಷೇಧಿಸಿತ್ತು. ಈ ಕ್ರಮವು ರಾಜಕೀಯ ಪ್ರೇರಿತ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬಂದಿದ್ದವು.

2016 ರಲ್ಲಿ ಅಧ್ಯಕ್ಷ ತ್ಸೈ ಇಂಗ್-ವೆನ್ ಅಧಿಕಾರ ವಹಿಸಿಕೊಂಡ ನಂತರದಿಂದಲೂ ಚೀನಾವು ತೈವಾನ್ ಮೇಲೆ ಒತ್ತಡ ಹೇರುತ್ತಲೇ ಬಂದಿದೆ. ಏಕೆಂದರೆ, ತ್ಸೈ ಇಂಗ್ ವೆನ್ ಅವರು ತೈವಾನ್ ನ್ನು ವಾಸ್ತವವಾಗಿ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸಿದ್ದಾರೆ ಮತ್ತು ತೈವಾನ್ ಚೀನಾದ ಭಾಗವಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಹೀಗಾಗಿ ಚೀನಾ ತೈವಾನ್ ವಿರುದ್ಧ ಕೆಂಡಕಾರುತ್ತಲೇ ಬಂದಿದೆ.

ಮೀನುಗಾರಿಕೆ ಉತ್ಪನ್ನಗಳು, ಚಹಾ ಮತ್ತು ಜೇನುತುಪ್ಪ ಸೇರಿದಂತೆ ಇತರ ತೈವಾನೀಸ್ ಸರಕುಗಳ ಆಮದಿನ ಮೇಲೆ ನಿರ್ಬಂಧ ವಿಧಿಸುವ ಮೂಲಕ ಚೀನಾ ನಿಯಂತ್ರಕ ನಿಯಮಗಳ ಉಲ್ಲಂಘನೆ ಮಾಡಿದೆ ಎಂದು ತೈವಾನ್‌ನ ಕೃಷಿ ಕೌನ್ಸಿಲ್ ಮಂಗಳವಾರ ಆರೋಪಿಸಿದೆ.

ಈ ಮಧ್ಯೆ ಚೀನಾದ ಫೈಟರ್ ಜೆಟ್‌ಗಳು ತೈವಾನ್ ನ್ನು ಸುತ್ತುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದ್ವೀಪರಾಷ್ಟ್ರದ ಪ್ರಮುಖ ಬಂದರುಗಳು ಮತ್ತು ನಗರ ಪ್ರದೇಶಗಳಿಗೆ ಚೀನಾ ಬೆದರಿಕೆ ಹಾಕಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಇದರ ಬೆನ್ನಲ್ಲೇ, ತೈವಾನ್ ಸೇನೆ ಕೂಡ ತನ್ನ ಯುದ್ಧ ವಿಮಾನಗಳನ್ನು ಪ್ರತಿ ದಾಳಿಗೆ ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ತಿಳಿಸಿವೆ.

ತೈವಾನ್‌ನಲ್ಲಿರುವ 23 ಮಿಲಿಯನ್ ಜನರು ಆಕ್ರಮಣದ ಭಯದೊಂದಿಗೆ ದೀರ್ಘಕಾಲ ಬದುಕಿದ್ದಾರೆ. ಆದರೆ, ಚೀನಾದ ಅತ್ಯಂತ ಸಮರ್ಥ ನಾಯಕ ಎನಿಸಿಕೊಂಡಿರುವ ಸದ್ಯದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿನ ಬೆದರಿಕೆಯು ತೀವ್ರಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com