ಹತ್ಯೆ ಯತ್ನ ಬಳಿಕವೂ ಪ್ರತಿಭಟನೆ ಮುಂದುವರೆಸುವುದಾಗಿ ಇಮ್ರಾನ್ ಖಾನ್ ಪ್ರತಿಜ್ಞೆ!

ತಮ್ಮ ಮೇಲೆ ನಡೆದ ಹತ್ಯೆ ಯತ್ನದ ಬಳಿಕವೂ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು, ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ವಜೀರಾಬಾದ್: ತಮ್ಮ ಮೇಲೆ ನಡೆದ ಹತ್ಯೆ ಯತ್ನದ ಬಳಿಕವೂ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು, ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ದೇಶದಲ್ಲಿ ಶೀಘ್ರ ಚುನಾವಣೆ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಇಮ್ರಾನ್ ಖಾನ್ ಅವರು ಲಾಹೋರ್ ನಿಂದ ಇಸ್ಲಾಮಾಬಾದ್ ಚಲೋ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆ ಭಾಗವಾಗಿ ಗುರುವಾರ ಇಮ್ರಾನ್ ಅವರು, ಪಂಜಾಬ್ ಪ್ರಾಂತ್ಯದ ವಜೀರಾಬಾದ್ ನಗರದಲ್ಲಿ ಲಾರಿಯ ಮೇಲೆ ಇರಿಸಲಾಗಿದ್ದ ಕಂಟೇನರ್ ಮೇಲೆ ಕುಳಿತು ಸಾಗುತ್ತಿದ್ದರು.

ಕಂಟೇನರ್ ಅಲ್ಲಾವಾಲಾ ಚೌಕ್ ಬಳಿ ಸಾಗುತ್ತಿದ್ದಾಗ, ಲಾರಿ ಪಕ್ಕದ ರಸ್ತೆಯಲ್ಲೇ ಬರುತ್ತಿದ್ದ ನವೀದ್ ಏಕಾಏಕಿ ಸ್ವಯಂಚಾಲಿತ ಗನ್ ಮೂಲಕ ಇಮ್ರಾನ್ ಖಾನ್ ರತ್ತ ಗುಂಡು ಹಾರಿಸಿದ್ದ. ಅದೃಶ್ಟವಶಾತ್ ಗುಂಡು ಇಮ್ರಾನ್ ದೇಹ ತಾಗುವ ಬದಲು ಅವರ ಕಾಲಿಗೆ ಹೊಕ್ಕಿತ್ತು.

ಕೂಡಲೇ ಸುತ್ತಲೂ ಇದ್ದ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಕಾರ್ಯಕರ್ತರು, ಇಮ್ರಾನ್ ರನ್ನು ಸುತ್ತುವರೆದು ಅವರನ್ನು ರಕ್ಷಣೆ ಮಾಡಿದರು. ಮತ್ತೊಂದೆಡೆ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಗೆ ಗುಂಡೇಟು ತಗುಲಿತ್ತೇ ಎಂಬುದು ಖಚಿತಗೊಂಡಿಲ್ಲ. ಬಳಿಕ ಇಮ್ರಾನ್ ರನ್ನು ಲಾಹೋರ್'ನ ಶೌಕತ್ ಖಾನೂಂ ಆಸ್ಪತ್ರೆಗೆ ದಾಖಲಿಸಲಾಯಿತು. ಇಮ್ರಾನ್ ಅವರ ಚಿಕಿತ್ಸೆ ಮೇಲುಸ್ತುವಾರಿಗೆ ವೈದ್ಯಕೀಯ ಮಂಡಳಿಯೊಂದನ್ನು ರಚನೆ ಮಾಡಲಾಗಿದೆ.

ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಅವರು, ನನಗೆ ಗೊತ್ತು ಅವರು ನನ್ನ ಸಾವನ್ನು ಬಯಸುತ್ತಾರೆ. ಆದರೆ, ಅವರಿಗೆ ಗೊತ್ತಿಲ್ಲ ಅಲ್ಲಾ ನನ್ನ ರಕ್ಷಣೆಗೆ ಇದ್ದಾನೆಂಬುದು. ಅಲ್ಲಾ ನನಗೆ ಹೊಸ ಜೀವನ ನೀಡಿದ್ದಾನೆ. ನನ್ನ ಹೋರಾಟ ನಿಲ್ಲದು? ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com