ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್

ಬ್ರಿಟನ್ ಪ್ರಧಾನಿ ಹುದ್ದೆ: ಬೋರಿಸ್ ಜಾನ್ಸನ್ ಕಮ್ ಬ್ಯಾಕ್! ಯಾರಿದ್ದಾರೆ ರೇಸ್ ನಲ್ಲಿ?

ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜಿನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರಧಾನಿ ಅಭ್ಯರ್ಥಿಗಳ ಕುರಿತ ಚರ್ಚೆ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಗೆ ಇದೀಗ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಹೆಸರೂ ಕೂಡ ಕೇಳಿಬರುತ್ತಿದೆ.
Published on

ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜಿನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರಧಾನಿ ಅಭ್ಯರ್ಥಿಗಳ ಕುರಿತ ಚರ್ಚೆ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಗೆ ಇದೀಗ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಹೆಸರೂ ಕೂಡ ಕೇಳಿಬರುತ್ತಿದೆ.

ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಗೆ ನಿಲ್ಲುವ ನಿರೀಕ್ಷೆಯಿದೆ ಎಂದು ಬ್ರಿಟನ್ ಪತ್ರಿಕೆಗಳು ವರದಿ ಮಾಡಿದ್ದು, ಬೋರಿಸ್ ಜಾನ್ಸನ್ ಸ್ಪರ್ಧೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಎಂದು ಅವರು ಭಾವಿಸಿದ್ದಾರೆ ಎಂದು ಬ್ರಿಟನ್ ನ ಟೈಮ್ಸ್ ಪೊಲಿಟಿಕಲ್ ಎಡಿಟರ್ ಸ್ಟೀವನ್ ಸ್ವಿನ್ಫೋರ್ಡ್ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೋವಿಡ್ -19 ಲಾಕ್‌ಡೌನ್ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಜಾನ್ಸನ್ ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ದೇಶದ ನೂತನ ಪ್ರಧಾನಿ ಆಗಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಿದ್ದರು.

ಮುಂದಿನ ವಾರದೊಳಗೆ ಉತ್ತರಾಧಿಕಾರಿ ಆಯ್ಕೆ
ಯುಕೆ ಪ್ರಧಾನಮಂತ್ರಿ ಲಿಜ್ ಟ್ರಸ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಹತ್ವಾಕಾಂಕ್ಷೆಯ ತೆರಿಗೆ ಕಡಿತ ನೀತಿಯ ನಡುವೆ ವಿವಾದಾತ್ಮಕ ಆಳ್ವಿಕೆಯನ್ನು ಕೊನೆಗೊಳಿಸಿದರು. ಯುನೈಟೆಡ್ ಕಿಂಗ್ ಡಮ್ ರಾಜಕೀಯ ಬೆಳವಣಿಗೆಯ ಮಧ್ಯೆ ಮುಂದಿನ ವಾರದೊಳಗೆ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಕ್ಕಾಗಿ ಚುನಾವಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ನಿರ್ಗಮಿತ ಪ್ರಧಾನಿ ಲಿಜ್‌ ಟ್ರಸ್‌ ಘೋಷಿಸಿದ್ದಾರೆ. ಕನ್ಸರ್ವೇಟಿವ್ ನಾಯಕ ಜೆರೆಮಿ ಹಂಟ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಮುಂಚಿತವಾಗಿ ಘೋಷಿಸಿದ್ದು, ಹೀಗಾಗಿ ಬ್ರಿಟನ್ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ರೇಸ್ ನಲ್ಲಿ ರಿಷಿಸುನಕ್
ಭಾರತ ಮೂಲದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಪೈಪೋಟಿ ನಡೆಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹುದ್ದೆ ತ್ಯಜಿಸುವಲ್ಲಿ ಸುನಕ್‌ ಅವರದ್ದೂ ಪಾತ್ರವಿದೆ ಎಂಬ ಅಪಖ್ಯಾತಿಯ ಹಿನ್ನೆಲೆಯಲ್ಲಿ ಪಕ್ಷದೊಳಗೆ ಅವರಿಗೆ ಶತ್ರುಗಳು ಸೃಷ್ಟಿಯಾಗಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಲಿಜ್ ಟ್ರಸ್ ಸೋಲಿಸಿದ ರಿಷಿ ಸುನಕ್ ಅವರು ಚುನಾವಣೆಯಲ್ಲಿ ಕಾಣಿಸಿಕೊಳ್ಳುವ ಸಂಭಾವ್ಯ ಹೆಸರುಗಳಲ್ಲಿ ಒಂದಾಗಿದೆ. ರಿಷಿ ಸುನಕ್ ಗೆದ್ದರೆ ಅವರು ಯುಕೆ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುತ್ತಾರೆ.

ಜತೆಗೆ, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಹೌಸ್ ಆಫ್ ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಹೆಸರೂ ಕೂಡ ಪ್ರಧಾನಿ ಸ್ಥಾನಕ್ಕೆ ಕೇಳಿ ಬಂದಿದೆ. ಈ ಹಿಂದೆ ನಾಯಕತ್ವಕ್ಕಾಗಿ ಸ್ಪರ್ಧೆ ಮಾಡಲು ವ್ಯಾಲೇಸ್ ನಿರಾಕರಿಸಿದ್ದರು. ಆದರೆ ಅವರು ಈ ಬಾರಿ ಸ್ಪರ್ಧೆ ಮಾಡಿದರೆ, ಮುಂಚೂಣಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ಸ್ಥಾನದಿಂದ ಕೆಳಗಿಳಿದ ನಂತರ ಶಾಸಕರಾಗಿ ಉಳಿದಿರುವ ಜಾನ್ಸನ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಸಂಸತ್ತಿನಲ್ಲಿ ಅವರ ಮಿತ್ರಪಕ್ಷಗಳು ಬೆಂಬಲವನ್ನು ಸಂಗ್ರಹಿಸಲು ಕೆಲಸ ಮಾಡುತ್ತಿವೆ ಎನ್ನಲಾಗಿದೆ. ಹೊಸ ನಾಯಕನ ನಾಮನಿರ್ದೇಶನಗಳು ಸೋಮವಾರ ಮಧ್ಯಾಹ್ನ ಮುಕ್ತಾಯಗೊಳ್ಳುತ್ತವೆ. ಪ್ರಧಾನಿ ಹುದ್ದೆ ಅಭ್ಯರ್ಥಿಗಳಿಗೆ 357 ಕನ್ಸರ್ವೇಟಿವ್ ಶಾಸಕರಲ್ಲಿ 100 ಮಂದಿಯ ಸಹಿ ಅಗತ್ಯವಿದೆ, ಅಂದರೆ ಗರಿಷ್ಠ ಮೂರು ಕ್ಷೇತ್ರಗಳಾಗಿದ್ದು, ಶಾಸಕರು ಸ್ಪರ್ಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಮತ ಚಲಾಯಿಸುತ್ತಾರೆ. ಅಂತಿಮ ಇಬ್ಬರಲ್ಲಿ ಸೂಚಕ ಮತವನ್ನು ನಡೆಸುತ್ತಾರೆ. ಪಕ್ಷದ 172,000 ಸದಸ್ಯರು ನಂತರ ಆನ್‌ಲೈನ್ ಮತದಾನದಲ್ಲಿ ಇಬ್ಬರು ಫೈನಲಿಸ್ಟ್‌ಗಳ ನಡುವೆ ವಿಜಯಿಗಳನ್ನು ನಿರ್ಧರಿಸುತ್ತಾರೆ. ಅಕ್ಟೋಬರ್ 28 ರೊಳಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ.

ಬ್ರಿಟನ್ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಎರಡೆರಡು ಬಾರಿ ಪ್ರಧಾನಿ ಅಭ್ಯರ್ಥಿ ಆಯ್ಕೆ ನಡೆಯುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com