ಪೆಲೋಸಿ ಭೇಟಿ ನಂತರ ತೈವಾನ್ ಬಳಿ ಚೀನಾದಿಂದ ಖಂಡಾಂತರ ಕ್ಷಿಪಣಿ ಉಡಾವಣೆ
ಚೀನಾದ ಎಚ್ಚರಿಕೆ ಕಡೆಗಣಿಸಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈಪೆ ಭೇಟಿಗೆ ಪ್ರತೀಕಾರವಾಗಿ ಚೀನಾ ಗುರುವಾರ ತೈವಾನ್ ದ್ವೀಪವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ.
Published: 04th August 2022 11:18 PM | Last Updated: 05th August 2022 01:19 PM | A+A A-

ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನಾದ ಎಚ್ಚರಿಕೆ ಕಡೆಗಣಿಸಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈಪೆ ಭೇಟಿಗೆ ಪ್ರತೀಕಾರವಾಗಿ ಚೀನಾ ಗುರುವಾರ ತೈವಾನ್ ದ್ವೀಪವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗುರುವಾರ ಮಧ್ಯಾಹ್ನ ತೈವಾನ್‌ನ ಪೂರ್ವದ ನೀರಿನಲ್ಲಿ ಸರಣಿ ಕ್ಷಿಪಣಿಗಳನ್ನು ಹಾರಿಸಿತು, ಇವೆಲ್ಲವೂ ನಿಖರವಾಗಿ ಗುರಿ ತಲುಪಿವೆ ಎಂದು ಚೀನಾದ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ರಾಕೆಟ್ ಪಡೆಗಳು ಅನೇಕ ಸ್ಥಳಗಳಲ್ಲಿ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯುವ ಹಲವಾರು ರೀತಿಯ ಕ್ಷಿಪಣಿಗಳನ್ನು ತೈವಾನ್‌ನ ಪೂರ್ವ ಕರಾವಳಿಯಿಂದ ಉಡಾಯಿಸಿತು ಎಂದು ಪಿಎಲ್‌ಎ ವಕ್ತಾರ ಹಿರಿಯ ಕರ್ನಲ್ ಶಿ ಯಿ ಹೇಳಿದ್ದಾರೆ.
ರಾಕೆಟ್ ಪಡೆಗಳು ಚೀನಾ ಮಿಲಿಟರಿಯ ಹೊಸ ವಿಭಾಗವಾಗಿದೆ, ಇದನ್ನು ಕೆಲವು ವರ್ಷಗಳ ಹಿಂದೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕ್ಷಿಪಣಿ ವ್ಯವಸ್ಥೆಗಳೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸಲು ಪ್ರಾರಂಭಿಸಿದ ಸುಧಾರಣೆಯಡಿ ರಚಿಸಲಾಗಿದೆ. ಕ್ಷಿಪಣಿಗಳ ನಿಖರತೆ ಮತ್ತು ಸಾಮರ್ಥ್ಯ ಪರೀಕ್ಷಿಸುವುದು ಈ ಪ್ರಯೋಗದ ಉದ್ದೇಶವಾಗಿತ್ತು. ಕ್ಷಿಪಣಿ ಪರೀಕ್ಷಾ ಕಾರ್ಯಾಚರಣೆಗಳು ಮುಕ್ತಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ: ಆಸಿಯಾನ್ ಎಚ್ಚರಿಕೆ ನಡುವೆ ಚೀನಾ ಮಿಲಿಟರಿ ಕಸರತ್ತು ಆರಂಭ
ಮುಂದಿನ ದಿನಗಳಲ್ಲಿ ತೈವಾನ್ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿ ಪಿಎಲ್‌ಎ ದೀರ್ಘ-ಶ್ರೇಣಿಯ ಫಿರಂಗಿ ದಾಳಿ ಮತ್ತು ಖಂಡಾಂತರ ಕ್ಷಿಪಣಿ ಉಡಾಯಿಸಲಿದೆ ಎಂದು ಸೇನೆಯನ್ನು ಉಲ್ಲೇಖಿಸಿ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರದವರೆಗೆ ಕ್ಷಿಪಣಿ ಪ್ರಯೋಗ ಮುಂದುವರಿಯುವ ನಿರೀಕ್ಷೆ ಇತ್ತು. ಈ ವಾರ ಎರಡನೇ ಬಾರಿಗೆ ಚೀನಾ ಸೇನೆಯು ತೈವಾನ್ ಜಲಸಂಧಿಯಲ್ಲಿ ಕ್ಷಿಪಣಿ ಪರೀಕ್ಷಾ ಯೋಜನೆಗಳನ್ನು ಘೋಷಿಸಿದೆ.
ಪೆಲೋಸಿ ದ್ವೀಪವನ್ನು ತೊರೆದ ನಂತರ, ಗುರುವಾರ ಮಧ್ಯಾಹ್ನ ತೈವಾನ್ ದ್ವೀಪದ ಈಶಾನ್ಯ ಮತ್ತು ನೈಋತ್ಯ ಪ್ರದೇಶದಲ್ಲಿ ನೀರಿನೊಳಗಿನಿಂದಲೂ 500 ಕಿ.ಮೀ ದೂರದ ಗುರಿ ಭೇದಿಸುವ ಕ್ಷಿಪಣಿಗಳನ್ನು ಚೀನಾದ ಪಿಎಲ್ ಎ ಉಡಾಯಿಸಿದೆ ಎಂದು ತೈವಾನ್ ದೃಢಪಡಿಸಿದೆ