ಪತ್ನಿ, ಮಗನ ಜೊತೆ ಅಮೆರಿಕದಲ್ಲಿ ನೆಲೆಸಲು ಲಂಕಾ ಮಾಜಿ ಅಧ್ಯಕ್ಷ ಗೊಟಬಯ ‘ಗ್ರೀನ್ ಕಾರ್ಡ್’ಗೆ ಅರ್ಜಿ!
ಶ್ರೀಲಂಕಾದಿಂದ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Published: 19th August 2022 01:21 PM | Last Updated: 19th August 2022 02:23 PM | A+A A-

ಗೋಟಬಯ ರಾಜಪಕ್ಸ
ಸಿಂಗಾಪುರ: ಶ್ರೀಲಂಕಾದಿಂದ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜಪಕ್ಸ ಅವರ ಪತ್ನಿ ಲೋಮಾ ರಾಜಪಕ್ಸ ಅವರು ಅಮೆರಿಕ ನಿವಾಸಿಯಾಗಿದ್ದು, ಅಲ್ಲಿಯ ಪೌರತ್ವವನ್ನೂ ಪಡೆದಿದ್ದಾರೆ. ಹೀಗಾಗಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಗೊಟಬಯ ಅವರು ಅರ್ಹರಾಗಿದ್ದಾರೆ. ‘ಗ್ರೀನ್ ಕಾರ್ಡ್’ ಪಡೆಯಲು ರಾಜಪಕ್ಸ ಅವರ ವಕೀಲರು ಕಳೆದ ತಿಂಗಳು ಅರ್ಜಿ ಸಲ್ಲಿಸಿ, ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಮೂಲಗಳ ಮಾಹಿತಿ ಉಲ್ಲೇಖಿಸಿ ಶ್ರೀಲಂಕಾದ ದಿನಪತ್ರಿಕೆಯೊಂದು ವರದಿ ಮಾಡಿದೆ.
ಇದನ್ನೂ ಓದಿ: ಭಾರತ, ಅಮೆರಿಕಾ ಕಳವಳದ ನಡುವೆಯೂ ಲಂಕಾ ಬಂದರಿಗೆ ಚೀನಾದ ಸರ್ವೇಕ್ಷಣಾ ನೌಕೆ ಆಗಮನ!
ಶ್ರೀಲಂಕಾ ಸೇನೆಯಲ್ಲಿದ್ದ ರಾಜಪಕ್ಸ ಅವರು ನಿವೃತ್ತಿ ಪಡೆದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಮುಖ ಮಾಡಿ, 1998 ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ನಂತರ 2005 ರಲ್ಲಿ ಶ್ರೀಲಂಕಾಕ್ಕೆ ಮರಳಿದ್ದರು. ಬಳಿಕ ರಾಜಪಕ್ಸ ಅವರು 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಮೆರಿಕ ಪೌರತ್ವವನ್ನು ತ್ಯಜಿಸಿದ್ದರು.
ಪ್ರಸ್ತುತ ಬ್ಯಾಂಕಾಕ್‌ನ ಹೋಟೆಲ್‌ನಲ್ಲಿ ತಮ್ಮ ಪತ್ನಿಯೊಂದಿಗೆ ತಂಗಿರುವ 73 ವರ್ಷದ ಮಾಜಿ ಅಧ್ಯಕ್ಷ ಗೊಟಬಯ ಕನಿಷ್ಠ ನವೆಂಬರ್‌ವರೆಗೆ ಥೈಲ್ಯಾಂಡ್‌ನಲ್ಲಿ ಉಳಿಯುವ ತಮ್ಮ ಈ ಹಿಂದಿನ ಯೋಚನೆಯನ್ನು ಅವರು ಕೈಬಿಟ್ಟಿದ್ದು, ರಾಜಪಕ್ಸ ಆಗಸ್ಟ್ 25ರಂದು ಶ್ರೀಲಂಕಾಕ್ಕೆ ಹಿಂತಿರುಗಲಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ
ಎರಡು ದಿನಗಳ ಹಿಂದೆ ತಮ್ಮ ವಕೀಲರನ್ನು ಸಂಪರ್ಕಿಸಿದ್ದ ಗೊಟಬಯ, ‘ಭದ್ರತೆಯ ಕಾರಣದಿಂದಾಗಿ ಥೈಲ್ಯಾಂಡ್‌ನಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಅನುಮತಿ ಸಿಗುತ್ತಿಲ್ಲ. ಹೀಗಾಗಿ ಶ್ರೀಲಂಕಾಕ್ಕೆ ಮರಳಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದರು.
ಹೊಟೆಲ್ ನಲ್ಲಿಯೇ ಇರಲು ಪೊಲೀಸರ ಸೂಚನೆ
ಇನ್ನು ಬ್ಯಾಂಕಾಕ್‌ಗೆ ಆಗಮಿಸಿದ್ದ ಗೊಟಬಯ ಅವರಿಗೆ ಭದ್ರತೆ ದೃಷ್ಟಿಯಿಂದ ಹೋಟೆಲ್ ಬಿಟ್ಟು ಹೊರಗೆ ಬಾರದಂತೆ ಥಾಯ್ಲೆಂಡ್ ಪೊಲೀಸರು ಸಲಹೆ ನೀಡಿದ್ದರು. ದೇಶದಲ್ಲಿ ಉಳಿಯುವಷ್ಟು ದಿನ ಹೋಟೆಲ್‌ನಲ್ಲೇ ಇರುವಂತೆಯೂ ಸೂಚಿಸಿದ್ದಾರೆ. ಅವರು ತಂಗಿರುವ ಹೋಟೆಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. ಗೊಟಬಯ ಈ ತಿಂಗಳು ಶ್ರೀಲಂಕಾಕ್ಕೆ ಮರಳಿದ್ದೇ ಆದರೆ, ಅವರಿಗೆ ಮಾಜಿ ಅಧ್ಯಕ್ಷರಿಗೆ ನೀಡಲಾಗುವ ಭದ್ರತೆಯನ್ನು ಒದಗಿಸುವ ಬಗ್ಗೆ ಸಚಿವ ಸಂಪುಟವು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಗೋಟಬಯ ರಾಜಪಕ್ಸೆ ಸಹೋದರರಾದ ಮಹಿಂದಾ ಮತ್ತು ಬಸಿಲ್ ಲಂಕಾ ತೊರೆಯದಂತೆ ಸುಪ್ರೀಂ ಕೋರ್ಟ್ ನಿರ್ಬಂಧ
ದೇಶದ ಆರ್ಥಿಕ ದುಸ್ಥಿತಿಯ ಕಾರಣಕ್ಕೆ ಜನರಿಂದ ಎದುರಾದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗೊಟಬಯ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಥಾಯ್ಲೆಂಡ್ ಗೆ ಪಲಾಯನ ಮಾಡಿದ್ದರು.
ಮಾಲ್ಡೀವ್ಸ್ ನಂತರ ಥಾಯ್ಲೆಂಡ್ ಎರಡನೇ ಆಗ್ನೇಯ ಏಷ್ಯಾದ ದೇಶವಾಗಿದ್ದು, ಕಳೆದ ತಿಂಗಳು ಸಾಮೂಹಿಕ ಪ್ರತಿಭಟನೆಗಳ ಮಧ್ಯೆ ರಾಜಪಕ್ಸೆ ತಮ್ಮ ದ್ವೀಪ ರಾಷ್ಟ್ರದಿಂದ ಪಲಾಯನ ಮಾಡಿದ ನಂತರ ತಾತ್ಕಾಲಿಕ ಆಶ್ರಯವನ್ನು ಪಡೆಯುತ್ತಿದ್ದಾರೆ.