ಪ್ರತಿಭಟನೆಗೆ ಮಣಿದ ಚೀನಾ: ಕಟ್ಟುನಿಟ್ಟಾದ ಕೋವಿಡ್-19 ನಿರ್ಬಂಧಗಳು ಮತ್ತಷ್ಟು ಸಡಿಲ

ಕಳೆದ ವಾರಾಂತ್ಯದಲ್ಲಿ ಚೀನಾದಲ್ಲಿ ನಡೆದ ವ್ಯಾಪಕ ಪ್ರತಿಭಟನೆ ನಂತರ ಸರ್ಕಾರ ಬಹಳಷ್ಟು ನಗರಗಳಲ್ಲಿ ಹೇರಲಾಗಿದ್ದ ಅತ್ಯಂತ ಕಠಿಣ ಕೋವಿಡ್ ನಿರ್ಬಂಧಗಳನ್ನು ಬುಧವಾರ ಸಡಿಲಗೊಳಿಸಿದೆ.
ಕೊರೊನಾವೈರಸ್ ಪರೀಕ್ಷಾ ಕೇಂದ್ರದ ಬಳಿ ನಿವಾಸಿಗಳು ತಮ್ಮ ವಾಡಿಕೆಯ ಕೋವಿಡ್ ಪರೀಕ್ಷೆಗಾಗಿ ಸಾಲಿನಲ್ಲಿ ನಿಂತಿರುವುದು
ಕೊರೊನಾವೈರಸ್ ಪರೀಕ್ಷಾ ಕೇಂದ್ರದ ಬಳಿ ನಿವಾಸಿಗಳು ತಮ್ಮ ವಾಡಿಕೆಯ ಕೋವಿಡ್ ಪರೀಕ್ಷೆಗಾಗಿ ಸಾಲಿನಲ್ಲಿ ನಿಂತಿರುವುದು

ಬೀಜಿಂಗ್: ಕಳೆದ ವಾರಾಂತ್ಯದಲ್ಲಿ ಚೀನಾದಲ್ಲಿ ನಡೆದ ವ್ಯಾಪಕ ಪ್ರತಿಭಟನೆ ನಂತರ ಸರ್ಕಾರ ಬಹಳಷ್ಟು ನಗರಗಳಲ್ಲಿ ಹೇರಲಾಗಿದ್ದ ಅತ್ಯಂತ ಕಠಿಣ ಕೋವಿಡ್ ನಿರ್ಬಂಧಗಳನ್ನು ಬುಧವಾರ ಸಡಿಲಗೊಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದಾಗ ಸಂಪೂರ್ಣ ಜಿಲ್ಲೆಗಳು ಮತ್ತು ನೆರೆಹೊರೆಗಳಿಗೆ ಸಂಪೂರ್ಣ ಲಾಕ್‌ಡೌನ್ ಹೇರುವ ಬದಲಾಗಿ ಪ್ರತ್ಯೇಕ ಅಪಾರ್ಟ್ಮೆಂಟ್ ಮಹಡಿಗಳು ಮತ್ತು ಕಟ್ಟಡಗಳಿಗೆ ಸೀಮಿತಗೊಳಿಸುವುದಾಗಿ ಹೇಳಿದೆ.

ಕೋವಿಡ್ ಪಾಸಿಟಿವ್ ಆದ ಜನರು ಇದೀಗ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿರಬಹುದು ಎಂದು ಹೇಳಿದೆ.

ದೇಶದಲ್ಲಿ ಹೇರಲಾಗಿದ್ದು ಶೂನ್ಯ ಕೋವಿಡ್ ನೀತಿಯ ವಿರುದ್ಧ ಹಲವಾರು ನಗರಗಳಲ್ಲಿ ನಡೆದ ಪ್ರತಿಭಟನೆಗಳ ಬಳಿಕ ಇದೀಗ ಕಠಿಣ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಕೋವಿಡ್ ನಿರ್ಬಂಧವು ನಾಲ್ಕನೇ ವರ್ಷಕ್ಕೆ ಪ್ರವೇಶಿಸುತ್ತಿದೆ. ಇದು ರಾಷ್ಟ್ರೀಯ ಆರ್ಥಿಕತೆಗೆ ಹೊಡೆತ ನೀಡಿದೆ. ಸಾಮಾನ್ಯ ಜನರ ಜೀವನ, ಪ್ರಯಾಣ ಮತ್ತು ಉದ್ಯೋಗದ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ.

ಕಳೆದ ತಿಂಗಳು ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಕಠಿಣ ಕೋವಿಡ್ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಕಠಿಣ ನಿರ್ಬಂಧಗಳಿಂದ ಬೇಸತ್ತಿದ್ದ ಜನ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿ, ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂಬ ಒತ್ತಡ ಹೇರಿದ್ದರು.

ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಪರೀಕ್ಷೆ ಇಲ್ಲದೇ ಜನ ಓಡಾಡುತ್ತಿದ್ದಾರೆ. ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಲು ಈವರೆಗೆ ಇದ್ದ ಕೋವಿಡ್ ಪರೀಕ್ಷೆಯ ನಿಯಮಗಳನ್ನು ಡಿ. 6ರಿಂದ ತೆಗೆದುಹಾಕಲಾಗಿದೆ.

ಚೀನಾದಲ್ಲಿ ಯಾವುದೇ ಲಕ್ಷಣ ಇಲ್ಲದ 25,696 ಜನರನ್ನೂ ಸೇರಿದಂತೆ 30,014 ಹೊಸ ಪ್ರಕರಣಗಳು ಸೋಮವಾರ ಪತ್ತೆಯಾಗಿವೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಕಳೆದ ವಾರ ಒಂದೇ ದಿನ 40,000 ಪ್ರಕರಣಗಳು ವರದಿಯಾಗಿದ್ದವು. ಈವರೆಗೆ ಚೀನಾದಲ್ಲಿ ಕೋವಿಡ್‌ನಿಂದಾಗಿ 5,235 ಸಾವು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com