ಕೊಲಂಬೋ: ಶ್ರೀಲಂಕಾದಲ್ಲಿ ಪಲಾಯನ ಮಾಡಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ ಸಿಕ್ಕಿರುವುದಾಗಿ ಸರ್ಕಾರ ವಿರೋಧಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಕುರಿತ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಡೀ ದೇಶ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರೆ ಲಂಕಾ ಅಧ್ಯಕ್ಷರು ಮಾತ್ರ ಕೋಟ್ಯಂತರ ಹಣವನ್ನು ಬಂಗಲೆಯಲ್ಲಿ ಹುದುಗಿಸಿಟ್ಟಿದ್ದರೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿದ್ದ ಪ್ರತಿಭಟನಾಕಾರರು ಬಂಗಲೆಯಲ್ಲಿ ಕೋಟ್ಯಾಂತರ ಹಣ ದೊರೆತಿದೆ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ.
ಗೊಟಬಯ ಅವರ ಐಷಾರಾಮಿ ನಿವಾಸದ ಸುತ್ತಲೂ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ಒಳಗೆ ನುಗ್ಗಿದ್ದ ಪ್ರತಿಭಟನಾಕಾರರು, ಅಲ್ಲಿ ಮೋಜು ಮಸ್ತಿ ಮಾಡಿದ್ದರು. ಶನಿವಾರ ರಾತ್ರಿಯನ್ನು ಅನೇಕರು ಅಲ್ಲಿಯೇ ಕಳೆದಿದ್ದರು. ಈಜುಕೊಳದಲ್ಲಿ ಈಜಾಡಿ ಮಜಾ ಮಾಡಿದ್ದರು. ಇನ್ನು ಅನೇಕರು ಅಡುಗೆ ಮನೆಗೆ ನುಗ್ಗಿ ಅಲ್ಲಿ ಅಡುಗೆ ಮಾಡಿ ತಿಂದಿದ್ದರು. ಇನ್ನು ಕೆಲವರು ನಿವಾಸದಲ್ಲಿ ಗುಪ್ತವಾಗಿ ಇರಿಸಿದ್ದ ದೊಡ್ಡ ದೊಡ್ಡ ನೋಟಿನ ಕಂತೆಗಳನ್ನು ಹುಡುಕಿ ಹೊರತೆಗೆದಿದ್ದಾರೆ. ಪ್ರತಿಭಟನಾಕಾರರು ಅದನ್ನು ಎಣಿಸುವುದು ವಿಡಿಯೋಗಳಲ್ಲಿ ದಾಖಲಾಗಿದೆ. ಆದರೆ, ಹೀಗೆ ದೊರೆತ ಹಣವನ್ನು ತಾವೇ ಕೊಂಡೊಯ್ಯುವುದಿಲ್ಲ. ಬದಲಾಗಿ ಭದ್ರತಾ ಘಟಕಗಳಿಗೆ ಒಪ್ಪಿಸಿರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಇದರ ಸತ್ಯಾಸತ್ಯತೆಗಳನ್ನು ಪರಿಶೀಲನೆ ಮಾಡಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಆಕ್ರೋಶಿತ ಜನರು ಗೊಟಬಯ ನಿವಾಸದಿಂದ ಅನೇಕ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಭಾನುವಾರ ಬೆಳಿಗ್ಗೆ ಎದ್ದು ಅಲ್ಲಿಯೇ ಜಿಮ್ ಮಾಡಿದ್ದಾರೆ. ಬಂಗಲೆಯ ಐಷಾರಾಮ ಕಂಡು ದಂಗಾಗಿದ್ದಾರೆ. "ಅವರು ಮಜಾ ಮಾಡುತ್ತಿದ್ದರೆ, ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರದ ಕೋಲಾಹಲದ ಬಳಿಕ ಭಾನುವಾರ ವಾಣಿಜ್ಯ ರಾಜಧಾನಿ ಕೊಲಂಬೋದಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಗೊಟಬಯ ಅವರ ನಿವಾಸದಲ್ಲಿ ಭಾರಿ ಹಾನಿ ಮಾಡಲಾಗಿದೆ. ಕೆಲವು ಪ್ರತಿಭಟನಾಕಾರರು ಏನನ್ನೂ ದೋಚಬೇಡಿ ಮತ್ತು ಹಾಳು ಮಾಡಬೇಡಿ ಎಂದು ಮನವಿ ಮಾಡಿದರೂ, ಜನರ ಗುಂಪು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನೊಂದೆಡೆ ಗೊಟಬಯ ಅವರು ಎಲ್ಲಿದ್ದಾರೆ ಎನ್ನುವ ಸುಳಿವು ಸಿಕ್ಕಿಲ್ಲ. ಕೊಲಂಬೋ ಬಂದರಿನಲ್ಲಿ ಹಡಗೊಂದಕ್ಕೆ ಹತ್ತಾರು ಚೀಲಗಳನ್ನು ತರಾತುರಿಯಲ್ಲಿ ತುಂಬುವುದು ಶನಿವಾರ ಕಂಡುಬಂದಿತ್ತು. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಗೊಟಬಯ ಅವರು ಸಮುದ್ರದ ಮಧ್ಯೆ ಇರಲಿದ್ದಾರೆ ಎಂದು ಹೇಳಲಾಗಿದೆ.
ಸೇನಾ ಮುಖ್ಯಸ್ಥರ ಮನವಿ
ಇತ್ತ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅರಾಜಕತೆ ಮಧ್ಯೆ ಅತಂತ್ರವಾಗಿರುವ ಶ್ರೀಲಂಕಾದಲ್ಲಿ ಸಹಜ ಸ್ಥಿತಿ ಮೂಡಲು ವರ್ಷಗಳೇ ಬೇಕಾಗಬಹುದು. ದೇಶದಲ್ಲಿ ಶಾಂತಿ ನೆಲೆಸಲು ಬೆಂಬಲ ನೀಡುವಂತೆ ಜನತೆಗೆ ಶ್ರೀಲಂಕಾ ಸೇನಾ ಮುಖ್ಯಸ್ಥ ಜನರಲ್ ಶವೇಂದ್ರ ಸಿಲ್ವ ಭಾನುವಾರ ಮನವಿ ಮಾಡಿದ್ದಾರೆ. ಈ ಮಧ್ಯೆ, ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. ರಾಜಕೀಯ ಅರಾಜಕತೆ ಶೀಘ್ರದಲ್ಲಿಯೇ ಪರಿಹಾರ ಕಾಣಲಿದ್ದು, ಇದು ಐಎಂಎಫ್ ಬೆಂಬಲಿತ ಯೋಜನೆ ಕುರಿತಾದ ಮಾತುಕತೆಯ ಪುನರಾರಂಭಕ್ಕೆ ಅನುವು ಮಾಡಿಕೊಡಲಿದೆ ಎಂದು ಆಶಿಸಿದೆ.
Advertisement