ಕೆನಡಾ: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ; ಘಟನೆಗೆ ಭಾರತ ಖಂಡನೆ!

ಕೆನಡಾದ ರಿಚ್‌ಮಂಡ್ ಹಿಲ್‌ನಲ್ಲಿರುವ ಹಿಂದೂ ದೇವಾಲಯದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಆಕ್ರೋಶಗೊಂಡಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಈ ಬಗ್ಗೆ ತಕ್ಷಣದ ತನಿಖೆಗೆ ಒತ್ತಾಯಿಸಿದೆ.
ಮಹಾತ್ಮಾ ಗಾಂಧಿ ಪ್ರತಿಮೆ
ಮಹಾತ್ಮಾ ಗಾಂಧಿ ಪ್ರತಿಮೆ

ಒಟ್ಟಾವಾ: ಕೆನಡಾದ ರಿಚ್‌ಮಂಡ್ ಹಿಲ್‌ನಲ್ಲಿರುವ ಹಿಂದೂ ದೇವಾಲಯದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಆಕ್ರೋಶಗೊಂಡಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಈ ಬಗ್ಗೆ ತಕ್ಷಣದ ತನಿಖೆಗೆ ಒತ್ತಾಯಿಸಿದೆ.

ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶಗಳಲ್ಲಿನ ವಿಷ್ಣು ದೇವಾಲಯದಲ್ಲಿ ಐದು ಮೀಟರ್ ಎತ್ತರದ ಪ್ರತಿಮೆಯನ್ನು ಬುಧವಾರ ಧ್ವಂಸಗೊಳಿಸಲಾಗಿದೆ ಎಂದು ಸಿಬಿಸಿ ಯಾರ್ಕ್ ಪ್ರಾದೇಶಿಕ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ. ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

'ಅತ್ಯಾಚಾರಿ' ಮತ್ತು 'ಖಲಿಸ್ತಾನ್' ಎಂಬ ಆಕ್ಷೇಪಾರ್ಹ ಪದಗಳನ್ನು ಸಹ ಪ್ರತಿಮೆಯ ಮೇಲೆ ಬರೆಯಲಾಗಿದೆ ಎಂದು ಯಾರ್ಕ್ ಪ್ರಾದೇಶಿಕ ಪೊಲೀಸ್ ವಕ್ತಾರ ಕಾನ್‌ಸ್ಟೆಬಲ್ ಆಮಿ ಬೌಡ್ರೊ ಹೇಳಿದ್ದಾರೆ.

'ಯಾವುದೇ ರೀತಿಯ ದ್ವೇಷ-ಪೂರ್ವಾಗ್ರಹ ಪೀಡಿತ ಘಟನೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ಯಾರ್ಕ್ ಪ್ರಾದೇಶಿಕ ಪೊಲೀಸರು, 'ಜನಾಂಗ, ರಾಷ್ಟ್ರೀಯತೆ, ಭಾಷೆ, ಬಣ್ಣ, ಧರ್ಮ, ವಯಸ್ಸು, ಲಿಂಗದ ಆಧಾರದ ಮೇಲೆ ಇತರರಿಗೆ ನೋವನ್ನು ಉಂಟುಮಾಡುವವರ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.

ದೇವಸ್ಥಾನದ ಅಧ್ಯಕ್ಷ ಡಾ.ಬುಧೇಂದ್ರ ದುಬೆ ಮಾತನಾಡಿ, ಈ ಘಟನೆಯು ಭಾರತೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಏಕೆಂದರೆ ಕಳೆದ 30 ವರ್ಷಗಳಿಂದ ಇಲ್ಲಿರುವ ಪ್ರತಿಮೆಯನ್ನು ಎಂದಿಗೂ ವಿರೂಪಗೊಳಿಸಲಾಗಿಲ್ಲ. ಘಟನೆಯ ನಂತರ, ಟೊರೊಂಟೊದಲ್ಲಿನ ಭಾರತದ ಕಾನ್ಸುಲೇಟ್ ಜನರಲ್ ಮತ್ತು ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ವಿಧ್ವಂಸಕತೆಯನ್ನು ಖಂಡಿಸಿದೆ. ವಿಗ್ರರೂಪಗೊಳಿಸಿರುವ ಘಟನೆ ಕುರಿತು ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com