ಕಠಿಣ ನಿರ್ಬಂಧಗಳ ಹೊರತಾಗಿಯೂ ಚೀನಾದಲ್ಲಿ ಆರು ತಿಂಗಳ ಬಳಿಕ ಕೋವಿಡ್‌ನಿಂದ ಮೊದಲ ಸಾವು
ಕೋವಿಡ್ ವಿರುದ್ಧ ಬೀಜಿಂಗ್ ಮತ್ತು ದೇಶದಾದ್ಯಂತ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕೋವಿಡ್-19 ನಿಂದಾಗಿ ಮೊದಲ ಸಾವು ಪ್ರಕರಣ ವರದಿಯಾಗಿದೆ.
Published: 20th November 2022 01:10 PM | Last Updated: 20th November 2022 01:52 PM | A+A A-

ಬೀಜಿಂಗ್‌ನಲ್ಲಿ ಕೊರೊನಾವೈರಸ್ ಸೋಂಕು ಪರೀಕ್ಷೆಗಾಗಿ ಮಾಸ್ಕ್ ಧರಿಸಿ ಸರದಿಯಲ್ಲಿ ನಿಂತಿರುವ ಜನ (ಚಿತ್ರ-ಎಪಿ)
ಬೀಜಿಂಗ್: ಕೋವಿಡ್ ವಿರುದ್ಧ ಬೀಜಿಂಗ್ ಮತ್ತು ದೇಶದಾದ್ಯಂತ ಹೇರಲಾಗಿರುವ ನಿರ್ಬಂಧಗಳ ನಡುವೆಯೂ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಕೋವಿಡ್-19 ನಿಂದಾಗಿ ಮೊದಲ ಸಾವು ಪ್ರಕರಣ ವರದಿಯಾಗಿದೆ.
ಮೇ 26 ರಿಂದೀಚೆಗೆ ಇದೇ ಮೊದಲು 87 ವರ್ಷದ ಬೀಜಿಂಗ್ ವ್ಯಕ್ತಿ ಸಾವಿಗೀಡಾಗಿರುವುದಾಗಿ ವರದಿಯಾಗಿದ್ದು, ಈ ಮೂಲಕ ಒಟ್ಟು ಮೃತರ ಸಂಖ್ಯೆ 5,227 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈ ಹಿಂದೆ ಶಾಂಘೈನಲ್ಲಿ ಸಾವಿನ ಪ್ರಕರಣ ವರದಿಯಾಗಿತ್ತು. ಚೀನಾದಲ್ಲಿ ಈವರೆಗೆ ಶೇ 92ಕ್ಕಿಂತ ಅಧಿಕ ಜನರು ಲಸಿಕೆಯನ್ನು ಪಡೆದಿದ್ದರೂ, ವಯಸ್ಸಾದವರಲ್ಲಿ ವಿಶೇಷವಾಗಿ 80 ವರ್ಷಕ್ಕಿಂತ ಮೇಲ್ಪಟ್ಟವರೇ ಬಹುಪಾಲು ಇನ್ನೂ ಲಸಿಕೆ ಪಡೆದಿಲ್ಲ.
ಈಗ ಮೃತಪಟ್ಟಿರುವವರ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ ಆಯೋಗವು ಯಾವುದೇ ವಿವರಗಳನ್ನು ನೀಡಿಲ್ಲ.
ಇದೇ ಕಾರಣಕ್ಕಾಗಿಯೇ ಚೀನಾ ಹೆಚ್ಚಾಗಿ ತನ್ನ ಗಡಿಗಳನ್ನು ಮುಚ್ಚಿದೆ ಎಂದು ಪರಿಗಣಿಸಲಾಗಿದೆ ಮತ್ತು ಲಾಕ್‌ಡೌನ್‌ಗಳು, ಕ್ವಾರಂಟೈನ್‌ಗಳು, ಪ್ರಕರಣ ಟ್ರೇಸಿಂಗ್ ಮತ್ತು ಸಾಮೂಹಿಕ ಪರೀಕ್ಷೆಗಳ ಮೂಲಕ ಸೋಂಕನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಇದು ಸಾಮಾನ್ಯ ಜನಜೀವನ ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ.
ಝೆಂಗ್‌ಝೌ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ 4 ತಿಂಗಳ ಮಗು ವಾಂತಿ ಮತ್ತು ಭೇದಿಯಿಂದ ಬಳಲುತ್ತಿತ್ತು. ಆರೋಗ್ಯ ಕಾರ್ಯಕರ್ತರು ನೆರವು ನೀಡಲು ನಿರಾಕರಿಸಿದ ನಂತರ ಆಕೆಯ ತಂದೆ ಇತರೆ ಸಹಾಯ ಪಡೆಯಲು 11 ಗಂಟೆ ಕಾಯಬೇಕಾಯಿತು ಮತ್ತು ಅಂತಿಮವಾಗಿ ಆಕೆಯನ್ನು 100 ಕಿಲೋಮೀಟರ್ (60 ಮೈಲುಗಳು) ದೂರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಶೂನ್ಯ ಕೋವಿಡ್ ನೀತಿಯಿಂದಾಗಿ ಇಂಟರ್ನೆಟ್ ಬಳಕೆದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಸಹಾಯ ಮಾಡಲು ವಿಫಲರಾದ ಝೆಂಗ್‌ಝೌ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.