ಪೆಟ್ರೋಲಿಯಂ ಪೈಪ್‌ಲೈನ್‌ ನಿರ್ಮಾಣಕ್ಕೆ ಭಾರತದ ಸಹಾಯ ಕೇಳಿದ ನೇಪಾಳ!

ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದ ಅಡಿಯಲ್ಲಿ ಇನ್ನೂ ಎರಡು ಪೆಟ್ರೋಲಿಯಂ ಪೈಪ್‌ಲೈನ್ ಯೋಜನೆಗಳನ್ನು ನಿರ್ಮಿಸಲು ನೇಪಾಳವು ಭಾರತದ ತಾಂತ್ರಿಕ ಬೆಂಬಲ ಮತ್ತು ಅನುದಾನವನ್ನು ಕೋರಿದೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಪೈಪ್ ಲೈನ್
ಪೆಟ್ರೋಲ್ ಪೈಪ್ ಲೈನ್

ಕಠ್ಮಂಡು: ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದ ಅಡಿಯಲ್ಲಿ ಇನ್ನೂ ಎರಡು ಪೆಟ್ರೋಲಿಯಂ ಪೈಪ್‌ಲೈನ್ ಯೋಜನೆಗಳನ್ನು ನಿರ್ಮಿಸಲು ನೇಪಾಳವು ಭಾರತದ ತಾಂತ್ರಿಕ ಬೆಂಬಲ ಮತ್ತು ಅನುದಾನವನ್ನು ಕೋರಿದೆ ಎಂದು ತಿಳಿದುಬಂದಿದೆ.

ಬಿಹಾರದ ಮೋತಿಹಾರಿ ಮತ್ತು ನೇಪಾಳದ ಬಾರಾ ಜಿಲ್ಲೆಯ ಆಮ್ಲೆಖ್‌ಗುಂಜ್ ನಡುವಿನ ಸುಮಾರು 69 ಕಿಮೀ ಉದ್ದದ ಪೆಟ್ರೋಲಿಯಂ ಪೈಪ್‌ಲೈನ್ ಅನ್ನು ಭಾರತದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಇದನ್ನು ಸೆಪ್ಟೆಂಬರ್ 10, 2019 ರಂದು ಉದ್ಘಾಟಿಸಲಾಗಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ನಿಂದ ನೇಪಾಳ ತೈಲ ನಿಗಮಕ್ಕೆ ಡೀಸೆಲ್ ಸರಬರಾಜು ಮಾಡಲು ಈ ಪೈಪ್ ಲೈನ್ ಬಳಸಲಾಗುತ್ತಿದೆ. ಮೋತಿಹಾರಿ-ಅಮ್ಲೆಖ್‌ಗುಂಜ್ ಪೈಪ್‌ಲೈನ್ ನಿರ್ಮಾಣದ ನಂತರ, ನೇಪಾಳ ಸರ್ಕಾರವು ಇನ್ನೂ ಎರಡು ಪೆಟ್ರೋಲಿಯಂ ಪೈಪ್‌ಲೈನ್ ಯೋಜನೆಗಳನ್ನು ನಿರ್ಮಿಸಲು ಭಾರತದೊಂದಿಗೆ ಜಿ2ಜಿ (ಸರ್ಕಾರದಿಂದ ಸರ್ಕಾರಕ್ಕೆ) ಒಪ್ಪಂದವನ್ನು ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಮತ್ತು ಈ ಸಂಬಂಧ ಭಾರತ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕೂಡ ರವಾನಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇಪಾಳವು ಇತ್ತೀಚೆಗೆ ಎರಡು ಪ್ರತ್ಯೇಕ ಪ್ರಸ್ತಾವನೆಗಳನ್ನು ರವಾನಿಸಿದ್ದು, ಒಂದು ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ನೇಪಾಳದ ಝಾಪಾವರೆಗೆ 52 ಕಿಮೀ ಪೈಪ್‌ಲೈನ್ ನಿರ್ಮಾಣ ಮತ್ತು ಮತ್ತೊಂದು  ಮೋತಿಹಾರಿ-ಅಮ್ಲೇಖ್‌ಗುಂಜ್ ಪೈಪ್‌ಲೈನ್‌ನ ವಿಸ್ತರಣೆಯಾಗಿ 69 ಕಿಮೀ ಪೈಪ್‌ಲೈನ್ (ನೇಪಾಳದೊಳಗೆ ಚಿತಾವಾನ್ ಜಿಲ್ಲೆಯ ಲೋಥಾರ್‌ಗೆ ಸಂಪರ್ಕಿಸುತ್ತದೆ) ಅನ್ನು ನಿರ್ಮಾಣ ಮಾಡುವುದಾಗಿದೆ ಎಂದು ನೇಪಾಳದ ವಾಣಿಜ್ಯ, ಕೈಗಾರಿಕೆ ಮತ್ತು ಸರಬರಾಜು ಸಚಿವಾಲಯದ ಅಧೀನ ಕಾರ್ಯದರ್ಶಿ ಊರ್ಮಿಳಾ ಕೆ ಸಿ ಪಿಟಿಐಗೆ ತಿಳಿಸಿದರು. 

"ಎರಡು ಪೈಪ್‌ಲೈನ್ ಯೋಜನೆಗಳ ನಿರ್ಮಾಣಕ್ಕಾಗಿ ಎಂಒಯುಗಳಿಗೆ ಸಹಿ ಹಾಕಲು ನಾವು ಭಾರತದ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎರಡೂ ಯೋಜನೆಗಳ ವಿವರವಾದ ಸಮೀಕ್ಷೆಯನ್ನು ನೇಪಾಳ ಮತ್ತು ಭಾರತದ ಜಂಟಿ ತಾಂತ್ರಿಕ ತಂಡವು ಈಗಾಗಲೇ ಪೂರ್ಣಗೊಳಿಸಿದೆ. ಸಿಲಿಗುರಿ-ಜಾಪಾ ಪೈಪ್‌ಲೈನ್ ನಿರ್ಮಾಣಕ್ಕೆ 288 ಕೋಟಿ ರೂಪಾಯಿ ವೆಚ್ಚವಾಗಿದ್ದರೆ, ಅಮ್ಲೇಖ್‌ಗುಂಜ್ ಚಿತಾವನ್ ಪೈಪ್‌ಲೈನ್‌ಗೆ 128 ಕೋಟಿ ರೂಪಾಯಿ ವೆಚ್ಚವಾಗಲಿದೆ. ನಾವು ಭಾರತವನ್ನು ತಾಂತ್ರಿಕ ಬೆಂಬಲ ಮತ್ತು ಪೈಪ್‌ಲೈನ್ ಯೋಜನೆಗಳ ನಿರ್ಮಾಣಕ್ಕೆ ಅನುದಾನದ ನೆರವು ಎರಡನ್ನೂ ಕೇಳಿದ್ದೇವೆ ಎಂದು ಊರ್ಮಿಳಾ ಹೇಳಿದರು. 

ಭಾರತದ ನೆರವಿನೊಂದಿಗೆ ಝಾಪಾ ಮತ್ತು ಚಿತಾವಾನ್‌ನಲ್ಲಿ ತಲಾ 40,000 ಕಿಲೋಲೀಟರ್ ಸಂಗ್ರಹಣಾ ಟ್ಯಾಂಕ್‌ಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಒಳಗೊಂಡಿದ್ದು, ನಾವು ಅಮ್ಲೇಖ್‌ಗುಂಜ್‌ನಲ್ಲಿ ತಲಾ 41,000 KL ಸಾಮರ್ಥ್ಯದ ಎರಡು ಶೇಖರಣಾ ಟ್ಯಾಂಕ್‌ಗಳನ್ನು ಪ್ರಸ್ತಾಪಿಸಿದ್ದೇವೆ, ಒಂದನ್ನು ಭಾರತದ ನೆರವಿನೊಂದಿಗೆ ನಿರ್ಮಿಸಲಾಗುವುದು ಮತ್ತು ಇನ್ನೊಂದನ್ನು ನೇಪಾಳ ಸರ್ಕಾರವೇ ನಿರ್ಮಿಸಲಿದೆ. ಒಮ್ಮೆ ಪೂರ್ಣಗೊಂಡ ನಂತರ, ಈ ಪೈಪ್‌ಲೈನ್‌ಗಳು ನೇಪಾಳಕ್ಕೆ ವಿಮಾನ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳಿಗೆ ಇಂಧನವನ್ನು ಪೂರೈಸುತ್ತದೆ. ಇಂಧನ ಸಾರಿಗೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com