ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯ ವಿಸ್ತೃತ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಮಾತನಾಡಿದ ಜಿನ್‌ಪಿಂಗ್, ಮುಂದಿನ ವರ್ಷ ನಡೆಯಲಿರುವ ಎಸ್‌ಸಿಒ ಶೃಂಗಸಭೆಯ ಭಾರತದ ಅಧ್ಯಕ್ಷತೆಗೆ ಚೀನಾದ ಬೆಂಬಲವಿದೆ ಎಂದು ಹೇಳಿದ್ದಾರೆ.
ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಿಎಂ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಸಿದ್ಧರಾಗಿದ್ದು ಈ ವೇಳೆ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಭಾರತಕ್ಕೆ ಅಭಿನಂದನಾ ಸಂದೇಶವನ್ನು ಸಹ ರವಾನಿಸಲಿದ್ದಾರೆ.
ಇಂದು 22ನೇ ಎಸ್‌ಸಿಒ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಕೋವಿಡ್ -19 ಸಾಂಕ್ರಾಮಿಕದ ನಂತರ ಜಗತ್ತು ಆರ್ಥಿಕ ಚೇತರಿಕೆಯ ಸವಾಲುಗಳನ್ನು ಎದುರಿಸುತ್ತಿವೆ. ಇದರ ನಡುವೆ ಎಸ್‌ಸಿಒ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಜಾಗತಿಕ ಜಿಡಿಪಿಯ ಶೇಕಡಾ 30ರಷ್ಟು ಕೊಡುಗೆಯನ್ನು ಎಸ್‌ಸಿಒ ದೇಶಗಳು ನೀಡುತ್ತಿದ್ದು, ವಿಶ್ವದ ಜನಸಂಖ್ಯೆಯ ಶೇಕಡ 40 ಪ್ರತಿಶತವನ್ನು ಎಸ್‌ಸಿಒ ದೇಶಗಳು ಹೊಂದಿವೆ ಎಂದರು.
ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಮತ್ತು ಜಾಗತಿಕ ಸಾಂಕ್ರಾಮಿಕವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡೆತಡೆಗಳಿಗೆ ಕಾರಣವಾಗಿದ್ದು, ಜಗತ್ತು ತೀವ್ರ ಶಕ್ತಿ ಮತ್ತು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಮೋದಿ ಹೇಳಿದರು.
ಆದ್ದರಿಂದ, SCO ಈ ಭಾಗಗಳಲ್ಲಿ 'ವಿಶ್ವಾಸಾರ್ಹ, ಸ್ಥಿತಿಸ್ಥಾಪಕ ಮತ್ತು ವೈವಿಧ್ಯಮಯ' ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಏತನ್ಮಧ್ಯೆ, ಪಾಶ್ಚಿಮಾತ್ಯ ಜಾಗತಿಕ ಪ್ರಭಾವಕ್ಕೆ ಸವಾಲು ಎಂದು ಹೇಳಲಾದ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ, ಪ್ರಾದೇಶಿಕ ರಾಷ್ಟ್ರಗಳು ಅಂತಾರಾಷ್ಟ್ರೀಯ ಕ್ರಮವನ್ನು ಮರುರೂಪಿಸಬೇಕೆಂದು ಕ್ಸಿ ಜಿನ್‌ಪಿಂಗ್ ಹೇಳಿದರು.
ಸದಸ್ಯರು 'ಶೂನ್ಯ ಮೊತ್ತದ ಆಟ ಮತ್ತು ತಡೆ ರಾಜಕೀಯವನ್ನು ತ್ಯಜಿಸಬೇಕು. ವಿಶ್ವಸಂಸ್ಥೆಯೊಂದಿಗೆ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕು. ಅಂತಾರಾಷ್ಟ್ರೀಯ ಕ್ರಮದ ಅಭಿವೃದ್ಧಿಯನ್ನು ಹೆಚ್ಚು ನ್ಯಾಯಯುತ ಮತ್ತು ತರ್ಕಬದ್ಧ ದಿಕ್ಕಿನಲ್ಲಿ ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕ್ಸಿ ಶೃಂಗಸಭೆಯಲ್ಲಿ ಹೇಳಿದರು.
1996ರಲ್ಲಿ ರೂಪುಗೊಂಡ ಶಾಂಘೈ ಫೈವ್, 2001ರಲ್ಲಿ ಉಜ್ಬೇಕಿಸ್ತಾನ್ ಸೇರ್ಪಡೆಯೊಂದಿಗೆ ಶಾಂಘೈ ಸಹಕಾರ ಸಂಸ್ಥೆ(SCO) ಆಗಿ ಬದಲಾಯಿತು. ಭಾರತ 2017ರಲ್ಲಿ ಈ ಒಕ್ಕೂಟವನ್ನು ಸೇರಿತ್ತು.
Advertisement