ಯೆಮೆನ್: ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ, 85 ಮಂದಿ ಸಾವು, ನೂರಾರು ಜನರಿಗೆ ಗಾಯ

ಯೆಮೆನ್'​ನ ರಾಜಧಾನಿ ಸನಾದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿ 85 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಯೆಮೆನ್.
ಯೆಮೆನ್.

ಯೆಮೆನ್: ಯೆಮೆನ್'​ನ ರಾಜಧಾನಿ ಸನಾದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿ 85 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ರಂಜಾನ್ ಪ್ರಯುಕ್ತ ಬಂಡುಕೋರರ ಗುಂಪು ರಾಜಧಾನಿಯಲ್ಲಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದನ್ನರಿತ ಜನರು ಸಾಗರೋಪಾದಿಯಲ್ಲಿ ಸ್ಥಳದಲ್ಲಿ ನೆರೆದಿದ್ದರು. ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಜನರನ್ನು ನಿಯಂತ್ರಿಸುವಲ್ಲಿ ಆಯೋಜಕರು ವಿಫಲರಾಗಿದ್ದಾರೆ.

ಈ ವೇಳೆ ಜನರ ತಿಕ್ಕಾಟ ಹೆಚ್ಚಾಗಿ ನೆರವು ಪಡೆಯಲು ನಾ ಮುಂದು ತಾಮುಂದು ಎಂದು ಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ 85 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ನೂರಾರು ಬಡ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ನೆರವು ಪಡೆಯಲು ಒಟ್ಟಿಗೆ ಜಮಾಯಿಸಿದ್ದರು. ನೆರವು ನೀಡಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಜನಸಮೂಹ ಒಂದೇ ಬಾರಿಗೆ ಸೇರಿದ್ದರಿಂದ ತಳ್ಳಾಟ ನೂಕಾಟ ಶುರುವಾಗಿದ್ದು, ಇದರಿಂದ ಭಾರಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾಲ್ತುಳಿತಲ್ಲಿ ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದುರಂತದ ಬಳಿಕ ಕಾರ್ಯಕ್ರಮ ಆಯೋಜಿಸಿದ್ದ ಶಾಲೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಇದೀಗ ಸ್ಥಳಧಲ್ಲಿ ಪತ್ರಕರ್ತರು ಸೇರಿದಂತೆ ಜನರ ಪ್ರವೇಶವನ್ನು ನಿರಾಕರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೌತಿಗಳ ಗುಂಪಿನ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೆಮೆನ್‌ನ ರಾಜಧಾನಿಯನ್ನು ಇರಾನ್ ಬೆಂಬಲಿತ ಹೌತಿಗಳು ನಿಯಂತ್ರಣಕ್ಕೆ ಪಡೆದಿದ್ದಾರೆ. 2014 ರಲ್ಲಿ ಸರ್ಕಾರದ ಹಿಡಿತದಿಂದ ದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com