ಪಾಕಿಸ್ತಾನ: ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ರಸ್ತೆ ಅಪಘಾತ; 18 ಮಂದಿ ಸಾವು, ಹಲವರಿಗೆ ಗಾಯ

ಭಾನುವಾರ ಬೆಳಗ್ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಲಾಹೋರ್: ಭಾನುವಾರ ಬೆಳಗ್ಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಾಚಿಯಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ  ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 4.30ರ ಸುಮಾರಿಗೆ ಲಾಹೋರ್‌ನಿಂದ 140 ಕಿಲೋಮೀಟರ್ ದೂರದಲ್ಲಿರುವ ಫೈಸಲಾಬಾದ್‌ನ ಪಿಂಡಿ ಭಟ್ಟಿಯಾನ್ ವಿಭಾಗದಲ್ಲಿ ಪಿಕ್ ಅಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಧನದ ಟ್ಯಾಂಕ್ ಅನ್ನು ಸಾಗಿಸುತ್ತಿದ್ದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಬಸ್ ಡಿಕ್ಕಿಯಾಗುತ್ತಿದ್ದಂತೆ ಎರಡೂ ವಾಹನಗಳಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಕನಿಷ್ಠ 18 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಐಜಿ) ಸುಲ್ತಾನ್ ಖವಾಜಾ ತಿಳಿಸಿದ್ದಾರೆ.

ಗಾಯಗೊಂಡಿದ್ದ 16 ಮಂದಿಯನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಜಿ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಬಸ್‌ನಿಂದ ಜಿಗಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳ ಚಾಲಕರೂ ಸಾವಿಗೀಡಾಗಿದ್ದಾರೆ ಎಂದು ಐಜಿ ತಿಳಿಸಿದ್ದಾರೆ.

'ಅಪಘಾತದ ಸಮಯದಲ್ಲಿ ಬಸ್ ಚಾಲಕ ನಿದ್ದೆ ಮಂಪರಿನಲ್ಲಿದ್ದರೇ ಅಥವಾ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆಯೇ' ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಡಿಕ್ಕಿಯಾದ ವಾಹನದಲ್ಲಿ ಇಂಧನ ಟ್ಯಾಂಕ್ ಇಲ್ಲದೇ ಇದ್ದಿದ್ದರೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಮೃತರ ಗುರುತನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆಮಾಡಲಿದ್ದು, ಬಳಿಕ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದಾದ್ಯಂತ ಸಾಮಾನ್ಯವಾಗಿ ಕಂಡುಬರುವ ರಸ್ತೆ ಅಪಘಾತಗಳು ಪ್ರತಿದಿನ ಹಲವಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ.

ಜುಲೈನಲ್ಲಿ ಪಂಜಾಬ್‌ನ ರಾಜನ್‌ಪುರ ಜಿಲ್ಲೆಯ ಫಜಿಲ್‌ಪುರ ಪ್ರದೇಶದಲ್ಲಿ ಬಸ್ ಪಲ್ಟಿಯಾಗಿ ಮಹಿಳೆ ಮತ್ತು ಇಬ್ಬರು ಅಪ್ರಾಪ್ತರು ಸೇರಿದಂತೆ ಐದು ಜನರು ಸಾವಿಗೀಡಾಗಿದ್ದರು ಮತ್ತು 20 ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com