Israel-Gaza Conflict: ಅಮೆರಿಕಾ ಎಚ್ಚರಿಕೆ ನಡುವಲ್ಲೂ ಯುದ್ಧ ನಿಲ್ಲದು ಎಂದ ಇಸ್ರೇಲ್

ಗಾಜಾ ಮೇಲೆ ಕಳೆದ 2 ತಿಂಗಳಿನಿಂದ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಒಂದೆಡೆ ಶೀಘ್ರದಲ್ಲೇ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಆಗ್ರಹಿಸುತ್ತಿದ್ದರೆ ಮತ್ತೊಂದೆಡೆ ಅಮೆರಿಕಾ ಕೂಡ ಇಸ್ರೇಲ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೆಂ: ಗಾಜಾ ಮೇಲೆ ಕಳೆದ 2 ತಿಂಗಳಿನಿಂದ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಒಂದೆಡೆ ಶೀಘ್ರದಲ್ಲೇ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಆಗ್ರಹಿಸುತ್ತಿದ್ದರೆ ಮತ್ತೊಂದೆಡೆ ಅಮೆರಿಕಾ ಕೂಡ ಇಸ್ರೇಲ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೂ ಎಲ್ಲಾ ಅಡೆತಡೆಗಳ ನಡುವಲ್ಲೂ ಹಮಾಸ್ ನಿರ್ನಾಮದ ಹೊರತು ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಈ ಕುರಿತು ಹೇಳಿಕೆ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಒತ್ತಡಗಳಿದ್ದರೂ, ಯಾರ ಬೆಂಬಲ ಲಭಿಸದಿದ್ದರೂ ನಾವು ಗಾಜಾದಲ್ಲಿ ಯುದ್ದವನ್ನು ಮುಂದುವರೆಸಲಿದ್ದೇವೆ. ಹಮಾಸ್ ಪಡೆ ನಿರ್ನಾಮವಾಗುವವರೆಗೂ, ವಿಜಯ ಲಭಿಸುವವರೆಗೂ ಹೋರಾಟ ಮುಂದುವರೆಸುತ್ತೇವೆಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿದೆ. ಆದರೂ ಬಹಳ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಯಾರೂ ಕೂಡ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ನಡುವೆ ಟಿವಿಯೊಂದಕ್ಕೆ ಹೇಳಿಕೆ ನೀಡಿರುವ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್, ಇಸ್ರೇಲಿ ಪಡೆಗಳು ಗಾಜಾವನ್ನು ಎಂದಿಗೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತೋರ್ಪಡಿಸಲಾಗಿದೆ. ನೀವು ಎಲ್ಲಿಯವರೆಗೂ ಗಾಜಾದಲ್ಲಿ ಇರುತ್ತೀರೋ ಅಷ್ಟು ನಿಮ್ಮ ಸಾವು ಮತ್ತು ನಷ್ಟಗಳ ಮೊತ್ತ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಅಂತಿಮವಾಗಿ ದೇವರ ಇಚ್ಛೆಯಂತೆ ನೀವು ನಿರಾಶೆ ಮತ್ತು ನಷ್ಟದ ಬಾಲವನ್ನು ಹೊತ್ತುಕೊಂಡು ಅದರಿಂದ ಹೊರಬರುತ್ತೀರಿ. ಹಮಾಸ್ ಇಲ್ಲದೆ ಗಾಜಾದಲ್ಲಿ ಯಾವುದೇ ಭವಿಷ್ಯದ ವ್ಯವಸ್ಥೆಯು ಕೇವಲ ಒಂದು ಭ್ರಮೆಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಗಾಜಾದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಇಸ್ರೇಲ್‌ನ ಪರಮಾತ್ಮ ರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಅಮೆರಿಕಾದ ಬೆಂಬಲ ಕೂಡ ಲಭಿಸಿತ್ತು. ಆದರೆ, ಸದ್ಯ ಪ್ಯಾಲೆಸ್ತೀನ್‌ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಕ್ರಮದ ಬಗ್ಗೆ ಸ್ವತಃ ಅಮೆರಿಕಾ ಕೂಡ ಅಸಮಾಧಾನ ವ್ಯಕ್ತಪಡಿಸಿದೆ.

ಇಸ್ರೇಲ್‌ನ ವಿವೇಚನಾರಹಿತ ಬಾಂಬ್ ದಾಳಿಯು ಅಂತರರಾಷ್ಟ್ರೀಯ ಬೆಂಬಲವನ್ನು ಕಳೆದುಕೊಳ್ಳುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಒಟ್ಟಿನಲ್ಲಿ ಆರಂಭಿಕ ಹಂತದಲ್ಲಿ ಇಸ್ರೇಲ್‌ಗೆ ಲಭಿಸಿದ್ದ ಬೆಂಬಲ ಇದೀಗ ಹಂತ ಹಂತವಾಗಿ ಕಡಿಮೆಯಾಗುತ್ತಾ ಬಂದಿದ್ದು, ಒತ್ತಡ ಹೆಚ್ಚಾಗಲು ಆರಂಭಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com