ಸೀಟ್ ಬೆಲ್ಟ್ ಧರಿಸದೆ ಕಾರು ಪ್ರಯಾಣ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೂ ದಂಡ ಹಾಕಿದ ಪೊಲೀಸರು

ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರಿಗೆ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್
ಬ್ರಿಟನ್ ಪ್ರಧಾನಿ ರಿಷಿ ಸುನಕ್
Updated on

ಲಂಡನ್‌: ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರಿಗೆ ಲಂಕಾಶೈರ್ ಪೊಲೀಸರು ದಂಡ ವಿಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಲೈವ್ ವಿಡಿಯೋ ಮಾಡುವ ವೇಳೆ ರಿಷಿ ಸುನಕ್ ಸೀಟ್‍ಬೆಲ್ಟ್ ಧರಿಸದೇ ಕಾರಿನ ಹಿಂಬದಿ ಸೀಟ್‍ನಲ್ಲಿ ಕುಳಿತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಮನಿಸಿದ ಬ್ರಿಟನ್ ಪೊಲೀಸರು ರಿಷಿಗೆ ದಂಡ ವಿಧಿಸಿದ್ದು, ಬ್ರಿಟನ್ ಪಿಎಂ ಮುಜುಗರ ಅನುಭವಿಸಿದ್ದಾರೆ.

ಮೂಲಗಳ ಪ್ರಕಾರ ಉತ್ತರ ಇಂಗ್ಲೆಂಡ್‌ಗೆ ಕಾರಿನಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೊ ಚಿತ್ರೀಕರಣ ಮಾಡಲು ತಾತ್ಕಾಲಿಕವಾಗಿ ಸೀಟ್‌ ಬೆಲ್ಟ್‌ ತೆಗೆದಿದ್ದ ರಿಷಿ ಸುನಕ್‌ ಅವರು ವಿವಾದಕ್ಕೆ ಕಾರಣವಾಗಿದ್ದರು. ಈ ಪ್ರಮಾದಕ್ಕಾಗಿ ಅವರು ಕ್ಷಮೆಯನ್ನೂ ಕೇಳಿದ್ದಾರೆ ಎನ್ನಲಾಗಿದೆ.

ದೇಶದಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ 100ಕ್ಕೂ ಅಧಿಕ ಕಾರ್ಯಕ್ರಮಗಳ ಕುರಿತ ಪ್ರಚಾರಕ್ಕಾಗಿ ಮಾಡಿದ್ದ ವಿಡಿಯೊವನ್ನು ಸುನಕ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಅವರು ಸೀಟ್‌ ಬೆಲ್ಟ್‌ ಧರಿಸದಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ಈ ವಿಷಯದ ಬಗ್ಗೆ ತನಿಖೆ ಮಾಡುವುದಾಗಿ ಪೊಲೀಸರು ತಿಳಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ‘ಅದು ತಪ್ಪು. ಸಣ್ಣ ಕ್ಲಿಪ್ ಅನ್ನು ಚಿತ್ರೀಕರಿಸಲು ಪ್ರಧಾನಿ ತಮ್ಮ ಸೀಟ್ ಬೆಲ್ಟ್ ಅನ್ನು ತೆಗೆದಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ’ ಎಂದು ಸುನಕ್ ಅವರ ವಕ್ತಾರರು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ, ಕಾರಿನ ಸೀಟ್‌ಬೆಲ್ಟ್ ಧರಿಸದವರಿಗೆ ಸ್ಥಳದಲ್ಲೇ 100 ಪೌಂಡ್‌ಗಳ (10 ಸಾವಿರ ರೂಗೂ ಹೆಚ್ಚು) ದಂಡ ವಿಧಿಸಲಾಗುತ್ತದೆ. ಪ್ರಕರಣ ನ್ಯಾಯಾಲಯಕ್ಕೆ ಹೋದರೆ ದಂಡ 500 ಪೌಂಡ್‌ಗಳಿಗೆ ಹೆಚ್ಚಲಿದೆ.

ಅಂದಹಾಗೆ ಪೊಲೀಸರಿಂದ ದಂಡ ಹಾಕಿಸಿಕೊಂಡ ಬ್ರಿಟನ್‌ನ ಎರಡನೇ ಪ್ರಧಾನಿ ಎಂಬ ಅಪಖ್ಯಾತಿಗೆ ಸುನಕ್‌ ಪಾತ್ರರಾಗಿದ್ದಾರೆ! ಈ ಹಿಂದೆ ಬೋರಿಸ್‌ ಜಾನ್ಸನ್‌ ಅವರಿಗೆ ಪೊಲೀಸರು ದಂಡ ವಿಧಿಸಿದ್ದರು. ಕಳೆದ ವರ್ಷ, ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಕೋವಿಡ್‌ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಸುನಕ್‌ ಅವರಿಗೆ ದಂಡ ವಿಧಿಸಿದ್ದರು. ಅದಾದ ನಂತರ ಎರಡನೇ ಬಾರಿಗೆ ಸುನಕ್‌ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಆರ್ಥಿಕ ಸಂಕಷ್ಟ, ನಾಯಕತ್ವ ಬದಲಾವಣೆ ಮತ್ತು ಇತರ ಕಾರಣಗಳಿಂದ ಸದ್ಯ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕನ್ಸರ್ವೇಟಿವ್‌ ಪಕ್ಷಕ್ಕೆ ಜನಪ್ರಿಯತೆ ತಂದುಕೊಡುವ ಪ್ರಯತ್ನದಲ್ಲಿರುವ ರಿಷಿ ಅವರಿಗೆ ಈ ಬೆಳವಣಿಗೆ ಹಿನ್ನಡೆ ಉಂಟು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com