ಭಾರತದ ಮೇಲೆ ಭರವಸೆ ಹೆಚ್ಚು, ಟೆಸ್ಲಾ ಕಂಪೆನಿ ಭಾರತದಲ್ಲಿ ಹೂಡಿಕೆ ಮಾಡುವುದು ಖಂಡಿತ: ಎಲೋನ್ ಮಸ್ಕ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಐತಿಹಾಸಿಕ ಅಮೆರಿಕ ಭೇಟಿಯ ಮೊದಲ ಭಾಗವಾಗಿ ನಿನ್ನೆ ಮಂಗಳವಾರ ನ್ಯೂಯಾರ್ಕ್ ಸಿಟಿಯಲ್ಲಿ ಜಗತ್ತಿನ ಖ್ಯಾತ ಬಿಲಿಯನೇರ್ ಉದ್ಯಮಿಗಳನ್ನು ಭೇಟಿ ಮಾಡಿದ್ದರು. ಅವರಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಒಬ್ಬರು.
ಎಲೋನ್ ಮಸ್ಕ್-ಪಿಎಂ ನರೇಂದ್ರ ಮೋದಿ
ಎಲೋನ್ ಮಸ್ಕ್-ಪಿಎಂ ನರೇಂದ್ರ ಮೋದಿ

ನ್ಯೂಯಾರ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಐತಿಹಾಸಿಕ ಅಮೆರಿಕ ಭೇಟಿಯ ಮೊದಲ ಭಾಗವಾಗಿ ನಿನ್ನೆ ಮಂಗಳವಾರ ನ್ಯೂಯಾರ್ಕ್ ಸಿಟಿಯಲ್ಲಿ ಜಗತ್ತಿನ ಖ್ಯಾತ ಬಿಲಿಯನೇರ್ ಉದ್ಯಮಿಗಳನ್ನು ಭೇಟಿ ಮಾಡಿದ್ದರು. ಅವರಲ್ಲಿ ಟೆಸ್ಲಾ(Tesla CEO) ಸಿಇಒ ಎಲೋನ್ ಮಸ್ಕ್(Elon Musk) ಕೂಡ ಒಬ್ಬರು.

ಎಲೋನ್ ಮಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು(PM Narendra Modi) ನಿನ್ನೆ ನ್ಯೂಯಾರ್ಕ್ ನಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮೋದಿ ಮತ್ತು ಭಾರತದ ಬಗ್ಗೆ ಮನಸಾರೆ ಹೊಗಳಿದ್ದಾರೆ.ವಿಶ್ವದ ಅನೇಕ ದೊಡ್ಡ ರಾಷ್ಟ್ರಗಳಲ್ಲಿ ಭರವಸೆಯ ಉಜ್ವಲ ಭವಿಷ್ಯ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದಿದ್ದಾರೆ.

ಭಾರತದ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ದೃಢವಾದ ನೆಲೆಯನ್ನು ಇಡಲು ಖ್ಯಾತ ಎಲೆಕ್ಟ್ರಿಕ್ ವೆಹಿಕಲ್ (EV) ದೈತ್ಯ ಕಂಪೆನಿ ಟೆಸ್ಲಾ ತೀವ್ರ ಉತ್ಸುಕವಾಗಿದೆ, ಟೆಸ್ಲಾ ಭಾರತಕ್ಕೆ ಹೆಜ್ಜೆಯಿಡುವುದಂತೂ ಖಂಡಿತ. ಈ ವರ್ಷ ತಮ್ಮ ಮುಂದಿನ ಪ್ರಮುಖ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪಿಸುವುದು ನಿಖರ ಎಂದು ಹೇಳಿದ್ದಾರೆ.

ಟೆಸ್ಲಾ ಕಂಪೆನಿಯ ಕಾರ್ಯಾಚರಣೆಗಳನ್ನು ಭಾರತೀಯ ಉಪಖಂಡದಲ್ಲಿ ವಿಸ್ತರಿಸಲು ಎಲೋನ್ ಮಸ್ಕ್ ಹೊಂದಿರುವ ಮಹತ್ವಾಕಾಂಕ್ಷೆ ಯೋಜನೆಗಳು ಉದ್ಯಮ ವಲಯ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಉತ್ಸಾಹಿಗಳಲ್ಲಿ ಆಶಾವಾದವನ್ನು ಹುಟ್ಟುಹಾಕಿರುವುದಂತೂ ಖಂಡಿತ.

ಟೆಸ್ಲಾ ಸದ್ಯದಲ್ಲಿಯೇ ಭಾರತಕ್ಕೆ ಕಾಲಿಡುವುದಂತೂ ಖಂಡಿತ. ಮಾನವೀಯವಾಗಿ ಸಾಧ್ಯವಾದಷ್ಟು ಬೇಗ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು. ಭಾರತದ ಬೆಂಬಲಕ್ಕಾಗಿ ನಾನು ಪ್ರಧಾನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಸದ್ಯದಲ್ಲಿಯೇ ಸಿಹಿಸುದ್ದಿ ನೀಡಲು ಸಾಧ್ಯವಿದೆ ಎಂದು ಆಶಿಸುತ್ತೇನೆ ಎಂದು ಮೋದಿ ಅವರನ್ನು ಭೇಟಿಯಾದ ನಂತರ ಎಲೋನ್ ಮಸ್ಕ್ ಹೇಳಿದ್ದಾರೆ. 

ಭಾರತದಲ್ಲಿ ಯಾವಾಗ ಎಷ್ಟು ಹೂಡಿಕೆ ಮಾಡುತ್ತೇವೆ, ಹೇಗೆ ಎಂದು ಅಷ್ಟು ನಿಖರವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಸದ್ಯದಲ್ಲಿಯೇ ಭಾರತದಲ್ಲಿ ಹೂಡಿಕೆ ಮಾಡುವುದಂತೂ ನಿಶ್ಚಿತ ಎಂದರು.

ಭಾರತದ ಸೌರ ಇಂಧನ ಹೂಡಿಕೆ ಬಗ್ಗೆ ಮಾತನಾಡಿದ ಮಸ್ಕ್, ಭಾರತದ ಭವಿಷ್ಯವನ್ನು ನೋಡಲು ಕಾತರನಾಗಿದ್ದೇನೆ. ಜಗತ್ತಿನ ಬೇರೆ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತ ಹೆಚ್ಚು ಭರವಸೆಯ ದೇಶವಾಗಿದೆ. ಪ್ರಧಾನಿ ಮೋದಿಯವರು ಭಾರತದ ಬಗ್ಗೆ ನಿಜವಾಗಿಯೂ ಕಾಳಜಿ ಹೊಂದಿದ್ದಾರೆ. ಭಾರತದಲ್ಲಿ ಮಹತ್ವದ ಹೂಡಿಕೆ ಮಾಡಲು ನಮ್ಮನ್ನು ಅನುಸರಿಸುತ್ತಿದ್ದಾರೆ ಎಂದರು.

ಹಾಗಾದರೆ ಮುಂದೆ ನೀವು ಪ್ರಧಾನಿಯವರನ್ನು ಯಾವಾಗ ಭೇಟಿ ಮಾಡುತ್ತೀರಿ ಎಂದು ಕೇಳಿದಾಗ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ. ನಿನ್ನೆ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ಸೌಭಾಗ್ಯ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com