ಇಸ್ರೇಲ್-ಹಮಾಸ್ ಯುದ್ಧ: ಗಾಜಾ ಶಿಬಿರದ ಮೇಲೆ ವಾಯು ದಾಳಿ, ಕನಿಷ್ಠ 30 ಮಂದಿ ಸಾವು

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ಪ್ರಾರಂಭವಾಗಿ 29 ದಿನ ಕಳೆದಿದ್ದು, ಹಮಾಸ್ ಬಂಡುಕೋರರನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ದ ಪ್ರಾರಂಭವಾಗಿ 29 ದಿನ ಕಳೆದಿದ್ದು, ಹಮಾಸ್ ಬಂಡುಕೋರರನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇದರಂತೆ ಶನಿವಾರ ತಡರಾತ್ರಿ ಸೆಂಟ್ರಲ್ ಗಾಜಾದ ಶಿಬಿರವೊಂದರ ಮೇಲೆ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಸೆಂಟ್ರಲ್‌ ಗಾಜಾ ಪಟ್ಟಿಯಲ್ಲಿರುವ ಅಲ್-ಮಘಾಝಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ದೇರ್ ಅಲ್-ಬಾಲಾಹ್‌ನಲ್ಲಿರುವ ಅಲ್-ಅಕ್ಸಾ ಮಾರ್ಟಿಯರ್ಸ್‌ ಆಸ್ಟತ್ರೆಗೆ ರವಾನಿಸಲಾಗಿದೆ. ವೈಮಾನಿಕ ದಾಳಿಗೆ ಹಲವು ಮನೆಗಳು ನೆಲಸಮಗೊಂಡಿವೆ ಎಂದು ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ತಿಳಿಸಿದ್ದಾರೆ.

ಯುದ್ಧದಿಂದ ಗಾಜಾದಲ್ಲಿ ಇದುವರೆಗೆ ಸುಮಾರು 9,227 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಪರಿಹಾರ ಕಾರ್ಯದಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ 72 ಮಂದಿಯೂ ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ವಿಶ್ವಸಂಸ್ಥೆಯ ಕದನ ವಿರಾಮ ನಿರ್ಣಯವನ್ನು ಇಸ್ರೇಲ್‌ ತಿರಸ್ಕರಿಸಿದೆ. ಹಮಾಸ್ ಬಂಡುಕೋರರನ್ನು ಸಂಪೂರ್ಣ ನಾಶ ಮಾಡುವುದೇ ಇಸ್ರೇಲ್‌ ಗುರಿ ಎಂದು ಪುನರುಚ್ಛರಿಸಿದೆ.

ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ರಾಷ್ಟ್ರಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.

ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಹಮಾಸ್‌ ಅನ್ನು ನಾಶಗೈಯ್ಯುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com