ವಾಷಿಂಗ್ಟನ್: ಜಿಮ್ ನಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಸಾವು

ಅಮೆರಿಕದ ಇಂಡಿಯಾನ ರಾಜ್ಯದ ಜಿಮ್‌ನಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವಾಲ್ಪಾರೈಸೊ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದ ಇಂಡಿಯಾನ ರಾಜ್ಯದ ಜಿಮ್‌ನಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವಾಲ್ಪಾರೈಸೊ ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಚಿಕಿತ್ಸೆ ಫಲಕಾರಿಯಾಗದೆ ವರುಣ್‌ ರಾಜ್ ಪುಚಾ (24) ಬುಧವಾರ (ನವೆಂಬರ್‌ 8) ಮೃತಪಟ್ಟಿದ್ದಾನೆ ಎಂದು ವರುಣ್‌ ರಾಜ್ ಪುಚಾ ಓದುತ್ತಿದ್ದ ವಾಲ್ಪರೈಸೋ ವಿಶ್ವವಿದ್ಯಾಲಯವು  ಮಾಹಿತಿ ನೀಡಿದೆ.

“ವರುಣ್‌ ರಾಜ್ ನಮ್ಮನ್ನೆಲ್ಲ ಅಗಲಿರುವುದು ಮನಸ್ಸಿಗೆ ತುಂಬ ಘಾಸಿ ಮಾಡಿದೆ. ನಮ್ಮ ವಿಶ್ವವಿದ್ಯಾಲಯದ ಕ್ಯಾಂಪಸ್‌ ಕುಟುಂಬದ ಸದಸ್ಯನನ್ನು ನಾವು ಕಳೆದುಕೊಂಡಿದ್ದೇವೆ. ವರುಣ್‌ ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ. ವರುಣ್‌ ರಾಜ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ವಿಶ್ವವಿದ್ಯಾಲಯವು ಸಂತಾಪ ಸೂಚಿಸಿದೆ.

ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವರುಣ್‌ ರಾಜ್, ಅಕ್ಟೋಬರ್‌ 29ರಂದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್‌ ಅಂಡ್ರಾಡೆ (24) ಎಂಬ ಯುವಕನು ಜಿಮ್‌ ಪ್ರವೇಶಿಸಿದ್ದಾನೆ.

ಜಿಮ್‌ ಪ್ರವೇಶಿಸಿದವನೇ ವರುಣ್‌ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್‌ ರಾಜ್ ಪುಚಾ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಜೋರ್ಡಾನ್‌ ಅಂಡ್ರಾಡೆಗೂ ವರುಣ್‌ ರಾಜ್‌ಗೂ ಯಾವುದೇ ಸಂಬಂಧ, ಪರಿಚಯ ಇರಲಿಲ್ಲ. ಇವರಿಬ್ಬರೂ ಒಂದು ದಿನವೂ ಪರಸ್ಪರ ಭೇಟಿಯಾದವರಲ್ಲ. ಆದರೆ, ಇತ್ತೀಚೆಗೆ ವರುಣ್‌ ರಾಜ್ ಪುಚಾನಿಂದ ನಿನಗೆ ಬೆದರಿಕೆ ಇದೆ ಎಂದು ಯಾರೋ ಜೋರ್ಡಾನ್‌ ಅಂಡ್ರಾಡೆಗೆ ತಿಳಿಸಿದ್ದರು.

ಇದರಿಂದ ಕುಪಿತಗೊಂಡಿದ್ದ ಜೋರ್ಡಾನ್‌ ಅಂಡ್ರಾಡೆ, ಕನಿಷ್ಠಪಕ್ಷ ವರುಣ್‌ ರಾಜ್ ಪುಚಾ ಜತೆಗೆ ಮಾತುಕತೆಯನ್ನೂ ನಡೆಸದೆ, ತಲೆಗೆ ಬಲವಾಗಿ ಚಾಕು ಇರಿದಿದ್ದಾನೆ. ಪ್ರಕರಣಕ್ಕೆ ಸಂಬಂಧಸಿದಂತೆ ಪೊಲೀಸರು ಜೋರ್ಡಾನ್‌ ಅಂಡ್ರಾಡೆಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com