ಇಸ್ರೇಲ್-ಹಮಾಸ್ ಯುದ್ಧ: ಮೆತ್ತಗಾದ ಉಗ್ರರಿಂದ 50 ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ, 4 ದಿನ ಕದನ ವಿರಾಮ!

ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್‌ ಅನುಮೋದಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೆಲ್‌ ಅವಿವ್‌: ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್‌ ಅನುಮೋದಿಸಿದೆ.

ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಕತಾರ್‌ ಮತ್ತು ಅಮೆರಿಕದ ಅಧಿಕಾರಿಗಳು, ಇಸ್ರೇಲ್ ಮತ್ತು ಹಮಾಸ್‌ ಒಪ್ಪಂದವು ಸನ್ನಿಹಿತವಾಗಿದೆ ಎಂದು ಕೆಲ ದಿನಗಳಿಂದ ಹೇಳುತ್ತಿದ್ದರು. ಈಗ ಅದು ನಿಜವಾಗಿದೆ.

ನಾಲ್ಕು ದಿನಗಳಲ್ಲಿ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯುದ್ಧ ವಿರಾಮ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಯುದ್ಧ ವಿರಾಮವನ್ನು ಇನ್ನೊಂದು ದಿನಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಆದರೆ, ಒತ್ತೆಯಾಳುಗಳಿಗೆ ಪ್ರತಿಯಾಗಿ ಹಮಾಸ್ ಕೈದಿಗಳ ಬಿಡುಗಡೆ ಬಗ್ಗೆ ಇಸ್ರೇಲ್ ಉಲ್ಲೇಖಿಸಿಲ್ಲ.

ಒಪ್ಪಂದದ ಭಾಗವಾಗಿ ಇಸ್ರೇಲ್ 150 ಪ್ಯಾಲೆಸ್ಟಿನ್ ಮಹಿಳೆಯರು ಮತ್ತು ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಿದ್ದು, ನಮ್ಮ ವಶದಲ್ಲಿರುವ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹಮಾಸ್ ತಿಳಿಸಿದೆ.

‘ಎಲ್ಲ ಒತ್ತೆಯಾಳುಗಳನ್ನು ಕರೆತರಲು ಇಸ್ರೇಲ್ ಸರ್ಕಾರ ಬದ್ಧವಾಗಿದೆ. ಇಂದು ರಾತ್ರಿ, ಈ ಗುರಿಯನ್ನು ಸಾಧಿಸಲು ಮೊದಲ ಹಂತದ ಪ್ರಸ್ತಾವಿತ ಒಪ್ಪಂದವನ್ನು ಅನುಮೋದಿಸಲಾಗಿದೆ’ಎಂದು ಹೇಳಿದೆ.

ಇದು ಯುದ್ಧದ ಅಂತ್ಯವಲ್ಲ...
ಈ ನಡುವೆ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಇಸ್ರೇಲ್‌ ಮೊದಲ ಕದನವಿರಾಮ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ ಎಂದು ಹೇಳಿದ್ದಾರೆ.

ಹಮಾಸ್ ನಿರ್ಮೂಲನೆಯಾಗುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

ಕತಾರ್‌ನ ಅಧಿಕಾರಿಗಳು ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದಾರೆ. ಹೆಚ್ಚು ಒತ್ತೆಯಾಳುಗಳ ಬಿಡುಗಡೆ ಮತ್ತು ಕಡಿಮೆ ರಿಯಾಯಿತಿಗಳನ್ನು ಒಳಗೊಂಡಂತೆ ಒಪ್ಪಂದ ರೂಪಿಸಲು ಯುಎಸ್ ಅಧ್ಯಕ್ಷ ಜೋ ಬೈಡೆನ್ ಸಹಾಯ ಮಾಡಿದ್ದಾರೆಂದು ಹೇಳಿದ್ದಾರೆ.

ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಮಾರಕ ದಾಳಿಗಳಲ್ಲಿ ಹಮಾಸ್‌ ಉಗ್ರ ಸಂಘಟನೆ ಇಸ್ರೇಲನ್ನು ಕೆಣಕಿತ್ತು. 250ಕ್ಕೂ ಅಧಿಕ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಒಯ್ದಿತ್ತು. ಪ್ರತಿಯಾಗಿ ಗಾಜಾದಲ್ಲಿ ಹಮಾಸ್‌ ಇರುವ ಕೇಂದ್ರಗಳ ಮೇಲೆ ಬಾಂಬ್‌ ದಾಳಿಗಳನ್ನು ಇಸ್ರೇಲ್‌ ನಡೆಸಿದೆ. 11,000ಕ್ಕೂ ಅಧಿಕ ಮಂದಿ ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ. ಹಮಾಸ್‌ನ ಹಲವು ಉಗ್ರ ನಾಯಕರನ್ನು ಕೊಂದಿರುವುದಾಗಿ ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ಗಾಜಾದ ಹಲವು ಆಸ್ಪತ್ರೆಗಳ ಮೇಲೆ ರಾಕೆಟ್‌ ದಾಳಿ ನಡೆದಿದ್ದು, ಅಲ್ಲಿ ಹಮಾಸ್‌ ಉಗ್ರರರು ಬಳಸುವ ಸುರಂಗಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com